ಸುದ್ದಿಮೂಲ ವಾರ್ತೆ
ಹೊಸಕೋಟೆ, ಜೂ 29 : ಪ್ರತಿಯೊಬ್ಬ ತರಬೇತಿದಾರರು ತಾವು ಮಾಡುವ ಕೆಲಸದ ಬಗ್ಗೆ ಕೀಳರಿಮೆಯನ್ನು ಬಿಟ್ಟು ಆತ್ಮಗೌರವವನ್ನು ಇಟ್ಟುಕೊಂಡು ಕೆಲಸ ಮಾಡಿ, ಬದುಕು ಉನ್ನತಿಯ ಹಾದಿಗೆ ತಲುಪುತ್ತದೆ ಎಂದು ನಿವೃತ್ತ ಯೋಧ ಶ್ರೀನಿವಾಸ್ ತಿಳಿಸಿದರು.
ನಗರದ ಎಂವಿಎಂ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ಐಟಿಐ ತರಬೇತಿದಾರರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಐಟಿಐ ಎನ್ನುವುದು ಒಂದು ಕೌಶಾಲ್ಯಾಧಾರಿತ ಶಿಕ್ಷಣವಾಗಿದೆ. ಪ್ರಸ್ತುತ ವೇಗದ ಜಗತ್ತಿನಲ್ಲಿ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಇರುವ ಮಹತ್ವ ಅಷ್ಟಿಷ್ಟಲ್ಲ. ಕೇವಲ ವೈದ್ಯರು, ಇಂಜಿನಿಯರ್ ವೃತ್ತಿ ಸೇರಿದಂತೆ ಇತರೆ ಉದ್ಯೋಗಗಳನ್ನು ಪಡೆಯುವ ದೃಷ್ಠಿಯಿಂದ ಶಿಕ್ಷಣದತ್ತ ದಾಪುಗಾಲಿಡುವ ವಿದ್ಯಾರ್ಥಿಗಳ ನಡುವೆ ಐಟಿಐ ತರಬೇತಿಗೆ ಬರುವ ವಿದ್ಯಾರ್ಥಿಗಳು ದೇಶದ ಅಭಿವೃದ್ದಿಗೆ ವಿಶೇಷ ಕೊಡುಗೆಯನ್ನು ನೀಡಲಿದ್ದಾರೆ ಎಂದು ಬಣ್ಣಿಸಿದರು.
ಐಟಿಐ ಸಂಸ್ಥೆಯ ಪ್ರಾಂಶುಪಾಲ ನಾಗರಾಜ್ ಮಾತನಾಡಿ, ಮನುಷ್ಯನಿಗೆ ಹಣ ಮತ್ತು ವಿದ್ಯೆ ಎಂಬುದು ಜೀವನದಲ್ಲಿ ಅತ್ಯಮೂಲ್ಯ ಸಂಪತ್ತಾಗಿದೆ. ನಾವು ಸಂಪಾದನೆ ಮಾಡಿದ ಹಣವನ್ನು ಯಾರಾದರೂ ಅಪಹರಿಸಬಹದು. ಬದಲಾಗಿ ಯಾರೊಬ್ಬರೂ ಕದಿಯಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದರು.
ಪ್ರಸ್ತುತ ಬೆಳೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಸಾಕಷ್ಟು ಬೇಡಿಕೆ ಇದೆ. ದೊಡ್ಡ ದೊಡ್ಡ ಕೈಗಾರಿಕೆಗಳು ಕೌಶ್ಯಲ್ಯ ಆಧಾರಿತ ಶಿಕ್ಷಣ ಪಡೆದವರಿಗೆ ಉದ್ಯೋಗ ಕ್ಷೇತ್ರದಲ್ಲಿ ಆದ್ಯತೆ ನೀಡುತ್ತಿದೆ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ನಂತರ ಕೌಶಲ್ಯ ಆಧಾರಿತ ಶಿಕ್ಷಣ ಕಲಿಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಕಸಾಪ ಜಿಲ್ಲಾ ಕಾರ್ಯದರ್ಶಿ ನಟರಾಜ್ ಎಂಎನ್ಆರ್, ಹೆಡ್ ಹೆಲ್ಡ್ ಐ ಫೌಂಡೇಷನ್ ವ್ಯವಸ್ಥಾಪಕ ಶ್ರೀಧರ್ ಪಟವಾರಿ, ರಾಜಶೇಖರ್, ಗುಂಜೂರು ಶಾಲೆ ಶಿಕ್ಷಕ ಜನಾರ್ಧನ್, ಕ್ವಿಸ್ ಪ್ರೈ ಲಿ. ಮುಖ್ಯಸ್ಥ ಅಶ್ವಿನ್ ಕುಮಾರ್ ಇದ್ದರು.