ಸುದ್ದಿಮೂಲ ವಾರ್ತೆ ಕುಷ್ಟಗಿ, ಜು. 01:
ಕೈ ಕೊಟ್ಟ ಮಳೆಯಿಂದ ಜಮೀನಿಗಾಗಿ ಮಾಡಿದ ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ಹಚ್ಚಿಕೊಂಡು ತಾಲೂಕಿನ ರೈತರೊಬ್ಬರು ನೇಣಿಗೆ ಶರಣಾದ ಘಟನೆ ಶನಿವಾರ ಜರುಗಿದೆ
ತಾಲೂಕಿನ ಬೋದೂರು ತಾಂಡದ ವಿಠ್ಠಪ್ಪ ಗೋವಿಂದಪ್ಪ ಚೌವ್ಹಾಣ (62) ಎಂಬ ಮೃತ ರೈತ. ಈತ ಬೋದೂರು ತಾಂಡದ ಬಳಿಯಲ್ಲಿ 3 ಎಕರೆ 20 ಗುಂಟೆ ಜಮೀನು ಹೊಂದಿದ್ದು, ಇದಕ್ಕಾಗಿ 5 ಲಕ್ಷ ರೂ. ಟ್ರಾಕ್ಟರ್ ಸಾಲ ಹಾಗೂ 5 ಲಕ್ಷ ರೂ. ಖಾಸಗಿ ಸಾಲ ಸೇರಿದಂತೆ ಒಟ್ಟು10 ಲಕ್ಷ ರೂ. ಮಾಡಿದ್ದರು.
ಮೃತ ರೈತನಿಗೆ ಮೂವರು ಪುತ್ರರು ಹಾಗೂ ಐವರು ಪುತ್ರಿಯರಿದ್ದು, ಇವರೆಲ್ಲರೂ ಕಬ್ಬು ಕಟಾವು ಕೆಲಸಕ್ಕೆ ಮಂಡ್ಯ ಜಿಲ್ಲೆಗೆ ಹೋಗಿದ್ದಾರೆ. ಗ್ರಾಮದಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದ. ರೈತನ ಮಳೆ ಸಕಾಲಿಕವಾಗಿ ಬಾರದ ಹಿನ್ನೆಲೆ ಮಾಡಿಕೊಂಡಿರುವ ಸಾಲ ತೀರಿಸುವ ಬಗ್ಗೆ ಚಿಂತೆಯಲ್ಲಿದ್ದರು. ಶನಿವಾರ ಬೆಳಗ್ಗೆ ಜಮೀನು ಕಡೆ ಹೋಗುವುದಾಗಿ ಹೇಳಿ ಮರಕ್ಕೆ ನೇಣಿಗೆ ಶರಣಾಗಿದ್ದಾರೆ. ಈ ಕುರಿತು ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈತನ ಆತ್ಮಹತ್ಯೆ ವಿಷಯ ತಿಳಿದು ಸ್ಥಳೀಯ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮೃತ ರೈತನ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.