ಸುದ್ದಿಮೂಲ ವಾರ್ತೆ
ಮೈಸೂರು, ಅ.6:ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ ಆಗುತ್ತಿದೆ. ಆದರೂ ರಾಜ್ಯ ಸರ್ಕಾರ ಕಣ್ಣು ಕಿವಿ ಇಲ್ಲದ ಗುಜರಿ ಸರ್ಕಾರವಾಗಿದೆ ಎಂದು ಖಂಡಿಸಿ ಕನ್ನಡ ಚಳವಳಿಗಾರರು ಚಾಮರಾಜನಗರದಲ್ಲಿ ಶುಕ್ರವಾರ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಶ್ರೀ ಚಾಮರಾಜೇಶ್ವರ ಉದ್ಯಾನವನ ಮುಂದೆ ಹಳೇ ಸೈಕಲ್ ಹಾಗೂ ಇನ್ನಿತರ ಸಾಮಗ್ರಿಗಳನ್ನು ಗುಜರಿಗೆ ಹಾಕುವಂತೆ ಅಣುಕು ಪ್ರದರ್ಶನ ಮಾಡಿದ್ದಲ್ಲದೆ ರಾಜ್ಯ ಸರ್ಕಾರವು ಗುಜರಿ ಹೋಗಲು ಸಿದ್ದವಾಗುವಂತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ಕನ್ನಡ ಚಳವಳಿಗಾರ ಶಾ.ಮುರಳಿ ಮಾತನಾಡಿ, ಕರ್ನಾಟಕ ತಮಿಳುನಾಡು ರಾಜ್ಯಗಳ ನಡುವೆ ಉಂಟಾಗಿರುವ ಕಾವೇರಿ ಜಲ ವಿವಾದದ ಜಲ್ವಂತ ಸಮಸ್ಯೆಯನ್ನು ಜೀವಂತವಾಗಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಅವರುಗಳಿಗೆ ರಾಜ್ಯ ಜನತೆಯ ನೆಮ್ಮದಿ ಶಾಂತಿ ಬೇಕಾಗಿಲ್ಲ , ಅಧಿಕಾರದ ತೆವಲಿನಲ್ಲಿ ಮುಗ್ದರನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಸೇನಾ ಪಡೆಯ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಮುಖಂಡರಾದ ಚಾ.ವೆಂ. ರಾಜಗೋಪಾಲ್, ಗು.ಪುರುಷೋತ್ತಮ್, ಪಣ್ಯದಹುಂಡಿ ರಾಜು, ಮಹೇಶ್ ಗೌಡ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.
ಮತ್ತೆ ಜಲಾಶಯಗಳ ಮಟ್ಟ ಕುಸಿತ
ಎರಡು, ಮೂರು ದಿನಗಳಲ್ಲಿ ಅಲ್ಲಲ್ಲಿ ಮಳೆ ಆಗುತ್ತಿದ್ದ ಜಲಾಶಯಗಳ ಒಳ ಹರಿವು ಕೊಂಚ ಏರಿಕೆ ಕಂಡಿತ್ತು. ಈಗ ಮಳೆ ನಿಂತ ಕಾರಣ ಜಲಾಶಯಗಳ ಮಟ್ಟ ಕುಸಿಯಲಾರಂಭಿಸಿದೆ. ಇದು ಹಳೆ ಮೈಸೂರು ಭಾಗದ ಜನರಿಗೆ ಮತ್ತೆ ನಿರಾಸೆ ಉಂಟು ಮಾಡಿದೆ. ಕೆಆರ್ ಎಸ್ ಡ್ಯಾಂಗೆ ಒಳಹರಿವು ತೀವ್ರ ಪ್ರಮಾಣದಲ್ಲಿ ಕಡಿಮೆಯಾಗಿದೆ. ಈ ಮೂಲಕ ಡ್ಯಾಂಗೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ ಗಣನೀಯ ಇಳಿಕೆ ಕಂಡಿದೆ.
11,800 ಕ್ಯೂಸೆಕ್ನಿಂದ 4,046 ಕ್ಯೂಸೆಕ್ಗೆ ಒಳಹರಿವು ಇಳಿಕೆಯಾಗಿದ್ದು, ಇದರಿಂದ ಮತ್ತೆ ಮಂಡ್ಯ ಜಿಲ್ಲೆಯ ಅನ್ನದಾತರು ಸೇರಿದಂತೆ ಕಾವೇರಿ ನೀರು ಆಶ್ರಯಿಸಿದ ಜನರಿಗೆ ತೀವ್ರ ಆಘಾತ ಉಂಟಾಗಿದೆ. ಒಳಹರಿವು ಹೆಚ್ಚಳದಿಂದ ಕೆಆರ್ಎಸ್ಗೆ 3 ಟಿಎಂಸಿ ನೀರು ಹರಿದು ಬಂದಿತ್ತು. ಸದ್ಯ ಡ್ಯಾಂ 101.80 ಅಡಿ ಭರ್ತಿಯಾಗಿದೆ.
ಒಂದು ವೇಳೆ ಮಳೆ ಮುಂದುವರೆದರೆ ಬೆಳೆ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ದೂರಾಗುವ ನಿರೀಕ್ಷೆ ಜನರಲ್ಲಿತ್ತು. ಆದರೆ ಮೂರೇ ದಿನಕ್ಕೆ ಮಳೆರಾಯ ಕೈಕೊಟ್ಟಿದ್ದಾನೆ. ಇಂದರಿಂದ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಕಾವೇರಿ ವಿವಾದ ಮುಂದುವರೆಯುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ
ಮತ್ತೊಂದೆಡೆ ರಾಜ್ಯ ಸರ್ಕಾರ ಹಾಗೂ ಕಾವೇರಿ ಪ್ರಾಧಿಕಾರದ ವಿರುದ್ಧ ಮಂಡ್ಯದಲ್ಲಿ ಪ್ರತಿಭಟನೆಗಳು ಶುಕ್ರವಾರ ಸಹ ಮುಂದುವರಿದಿವೆ. 32ನೇ ದಿನಕ್ಕೆ ರೈತ ಹಿತರಕ್ಷಣಾ ಸಮಿತಿಯ ಸತ್ಯಾಗ್ರಹ ಕಾಲಿಟ್ಟಿದೆ. ಕನ್ನಡ ಸೇನೆಯಿಂದಲೂ ಸಂಜಯ ಸರ್ಕಲ್ನಿಂದ ವಿಶ್ವೇಶ್ವರಯ್ಯ ಪ್ರತಿಮೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಅತ್ತ ಶ್ರೀರಂಗಪಟ್ಟಣದಲ್ಲೂ ಸಹ ಭೂಮಿ ತಾಯಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.