ಸುದ್ದಿಮೂಲ ವಾರ್ತೆ
ಸಿರುಗುಪ್ಪ: ಏ-01: ನಗರದ ತಾಲೂಕು ಆಡಳಿತ ಕಚೇರಿ ಆವರಣದಲ್ಲಿ ತಾಲೂಕಿನ ತೆಕ್ಕಲಕೋಟೆ, ಹಳೆಕೋಟೆ, ಉಪ್ಪಾರ ಹೊಸಳ್ಳಿ, ಬಲಕುಂದಿ, ಬೈರಾಪುರ, ಮುಂತಾದ ಗ್ರಾಮಗಳಿಂದ ಆಗಮಿಸಿದ್ದರು.
ರೈತರು ತಮ್ಮ ಭತ್ತದ ಗದ್ದೆಗಳಲ್ಲಿ ಬೆಳೆದು ನಿಂತ ಭತ್ತದ ಬೆಳೆಗೆ ಕೊನೆಯ ಹಂತದ ನೀರಿನ ಅವಶ್ಯಕತೆ ಇದೆ. ನಮಗೆ ಈ ಮೊದಲು ನೀರು ಬಿಡುವುದಾಗಿ ತಿಳಿಸಿದ ಕಾರಣದಿಂದ ನಾಟಿ ಮಾಡಿದ್ದೆವು. ಅಂದು ಏಪ್ರಿಲ್ ಹತ್ತರವರೆಗೂ ನೀರು ಕೊಡುವುದಾಗಿ ತಿಳಿಸಿದ್ದರು. ಆದರೆ ಇದೀಗ ಕಾಲುವೆಗೆ ನೀರು ಬರುತ್ತಿಲ್ಲವಾದ ಕಾರಣ ಬೆಳೆಗಳು ಒಣಗುತ್ತಿವೆ. ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ, ಈಗಾಗಲೇ ಸುಮಾರು 40 ರಿಂದ 50,000 ಪ್ರತಿ ಎಕರೆಗೆ ಖರ್ಚು ಮಾಡಿದ್ದೇವೆ ನಮ್ಮ ಗೋಳು ಕೇಳುವವರು ಯಾರು ಇಲ್ಲ ಅಧಿಕಾರಿಗಳನ್ನು ಕೇಳಿದರೆ ಚುನಾವಣಾ ಕರ್ತವ್ಯದಲ್ಲಿ ಇದ್ದೇವೆ ಎನ್ನುತ್ತಾರೆ
ಆದ ಕಾರಣ ಬೆಳೆ ಹಾಳಾದ ಮೇಲೆ ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಈಗಲೇ ತಾಲೂಕು ಆಡಳಿತ ಕಚೇರಿಯ ಅವರಣದಲ್ಲಿಯೇ ವಿಷ ಸೇವಿಸುತ್ತೇವೆ ಎಂದು ರಾಸಾಯನಿಕ ಕ್ರಿಮಿನಾಶಕಗಳ ಬಾಟಲಿಗಳೊಂದಿಗೆ ಬಂದಿದ್ದರು. ಪ್ರತಿಭಟನೆಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಬಂದು ರೈತರ ಕೈಗಳಲ್ಲಿದ್ದ ರಾಸಾಯನಿಕ ಕ್ರಿಮಿನಾಶಕ ಬಾಟಲಿಗಳನ್ನು ಪಡೆದರು
ನಂತರ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಎನ್.ಆರ್ ಮಂಜುನಾಥ ಸ್ವಾಮಿ ಕೃಷಿ ಅಧಿಕಾರಿ ಎಸ್.ಎಸ್. ಪಾಟೀಲ್ ಕಾಲುವೆ ಮೇಲ್ವಿಚಾರಕ ಸುರೇಶ್ ಪೂಜಾರಿ, ಸಿಪಿಐ ಯಶ್ವಂತ ಬಿಸ್ನಳ್ಳಿ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್ಐ ಕೆ ರಂಗಯ್ಯ ಹಾಗೂ ಇನ್ನಿತರ ಪೊಲೀಸ್ ಅಧಿಕಾರಿಗಳು ರೈತರ ಆಗ್ರಹದ ಅಳಲನ್ನು ಕೇಳಿ ತಿಳಿದುಕೊಂಡರು.
ಈ ವೇಳೆ ಮಂಜುನಾಥ ಸ್ವಾಮಿ ತಕ್ಷಣವೇ ನಾನು ನಿಮ್ಮೊಂದಿಗೆ ಅಧಿಕಾರಿಗಳನ್ನು ಕಳಿಸುತ್ತೇನೆ. ನೀವು ಅವರೊಂದಿಗೆ ಇದ್ದು ವರದಿ ಕೊಡಲು ಸಹಕರಿಸಿ. ನಾನು ಅನ್ನದಾತರ ತೊಂದರೆಗಳ ಪರಿಹಾರಕ್ಕೆ ಮನಃಪೂರ್ವಕವಾಗಿ ಕೆಲಸ ಮಾಡುತ್ತೇನೆಂದು ರೈತರೊಂದಿಗೆ ಅಧಿಕಾರಿಗಳನ್ನು ಕಳುಹಿಸಿದರು. ತಕ್ಷಣ ಕಾರ್ಯಪ್ರವೃತ್ತರಾಗಿ, ಈ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ ಕಳುಹಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ತುಂಗಭದ್ರಾ ರೈತ ಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನ, ನೆಣೆಕೆಪ್ಪ, ಜ್ಞಾನೇಂದ್ರ ಸ್ವಾಮಿ, ರಾಜಣ್ಣ, ವೀರೇಶ, ಸುಧಾಕರ ನೂರಾರು ರೈತರಿದ್ದರು