ಸುದ್ದಿಮೂಲವಾರ್ತೆ
ಕೊಪ್ಪಳ ಜು 28:ಇನ್ನೆರೆಡು ದಿನಗಳಲ್ಲಿ ಆಗಷ್ಟ ತಿಂಗಳು ಬರುತ್ತಿದೆ. ಜುಲೈ ತಿಂಗಳಾದರೂ ಕೊಪ್ಪಳ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಬಿತ್ತನೆಯಾಗಿಲ್ಲ. ತುಂಗಭದ್ರಾ ಜಲಾಶಯವನ್ನು ಆಶ್ರಯಿಸಿದ ಭೂಮಿಗೆ ನೀರು ಬಿಡುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಜಲಾಶಯವು ಈಗ ಅರ್ಧದಷ್ಟು ತುಂಬಿದೆ. ಈ ಹಿಂದೆ 30 ಟಿಎಂಸಿ ನೀರು ಇದ್ದಾಗಲೂ ನಾಲೆಗೆ ನೀರು ಬಿಟ್ಟಿದ್ದಾರೆ ನೀರು ಬಿಡಿ ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ರೈತರು. ಆದರೆ ಐಸಿಸಿ ಸಭೆಯಾಗಬೇಕು ಎಂಬ ನೆಪವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹೇಳುತ್ತಿದ್ದಾರೆ. ಸಚಿವರಿಗೆ ಮಾಹಿತಿ ಕೊರತೆ ಇದೆ. ಬೇಗನೆ ನೀರು ಬಿಡಿ ಎಂದು ಶಾಸಕರ ಒತ್ತಾಯವಾಗಿದೆ.
ಕರ್ನಾಟಕ, ಆಂಧ್ರ ತೆಲಂಗಾಣದ ಸುಮಾರು 11 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುತ್ತಿರುವ ತುಂಗಭದ್ರಾ ಜಲಾಶಯದಿಂದ ಈ ಬಾರಿ ನೀರಾವರಿ ಕಷ್ಟವೇನು ಎಂಬಂತ ಸ್ಥಿತಿ ಕಳೆದ ವಾರವಿತ್ತು. ಆದರೆ ಈಗ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಕೇವಲ ಹತ್ತು ದಿನಗಳಲ್ಲಿ ಸರಿಸುಮಾರು 50 ಟಿಎಂಸಿ ನೀರು ಸಂಗ್ರಹವಾಗಿದೆ. ಒಟ್ಟು 105.766 ಟಿಎಂಸಿ ಸಾಮಾರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ ಈಗ 58 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 1.09 ಲಕ್ಷ ಕ್ಯೂಸೆಕ್ ಒಳಹರಿವು ಇದೆ.
ಜುಲೈ ತಿಂಗಳಲ್ಲಿ ಭತ್ತ ನಾಟಿ ಮಾಡುತ್ತಿದ್ದ ರೈತರಿಗೆ ಜಲಾಶಯದಲ್ಲಿ ನೀರು ಕಡಿಮೆ ಇರುವ ಕಾರಣ ಇಲ್ಲಿಯವರೆಗೂ ನೀರು ಬಿಟ್ಟಿಲ್ಲ. ಕಳೆದ ವರ್ಷ ಜುಲೈ 12 ರಿಂದ ನಾಲೆಗಳಿಗೆ ನೀರು ಬಿಡಲಾಗಿತ್ತು. ಆದರೆ ಇಲ್ಲಿಯವರೆಗೂ ನೀರು ಬಿಟ್ಟಿಲ್ಲ. ಈ ಮೊದಲು ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಇತ್ತು. ಈಗ ಜಲಾಶಯ ಅರ್ಧದಷ್ಟು ತುಂಬಿದೆ. ಈಗ ನಾಲೆಗಳಿಗೆ ನೀರು ಬಿಡಬೇಕು. ವಿಳಂಭವಾದರೆ ಭತ್ತ ನಾಟಿ ಮಾಡಿದರೂ ಮುಂದಿನ ದಿನಗಳಲ್ಲಿ ರೋಗ ತಗುಲಿ ಇಳುವರಿ ಬರುವುದಿಲ್ಲ. ಬೇಗ ಐಸಿಸಿ ಸಭೆ ಕರೆದು ನೀರು ಬಿಡಿ ಎಂದು ರೈತರು ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನೀರು ನಿರ್ವಹಣಾ ಸಲಹಾ ಸಮಿತಿ ರಚನೆಯಾಗಬೇಕು. ಆದರೆ ಇನ್ನೂ ಆಗಿಲ್ಲ. ಈಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಮಿತಿ ರಚನೆ ಅಥವಾ ನೇರವಾಗಿ ನೀರು ಬಿಡುವ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಗಂಗಾವತಿ ಶಾಸಕ ಗಾಲಿ ಜನಾರ್ಧನರಡ್ಡಿ ಸಚಿವರಿಗೆ ಮಾಹಿತಿ ಕೊರತೆ ಇದೆ. ಜಲಾಶಯದ ಇತಿಹಾಸದಲ್ಲಿ 30 ಟಿಎಂಸಿ ನೀರು ಇದ್ದಾಗ ನಾಲೆಗಳಿಗೆ ನೀರು ಬಿಟ್ಟಿದ್ದಾರೆ. ಐಸಿಸಿ ಸಭೆಯಾಗದೆ ನೀರು ಬಿಡಬಹುದು. ರೈತರಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಸರಕಾರ ಬೇಗನೆ ನಾಲೆಗಳಿಗೆ ನೀರು ಬಿಡಬೇಕೆಂದು ಆಗ್ರಹಿಸಿದ್ದಾರೆ.
ಈ ಮಧ್ಯೆ ನಾಲೆಯ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಗಳು ಮುಗಿಯಲು ಇನ್ನೂ ಒಂದು ವಾರ ಬೇಕು ಅಲ್ಲಿಯವರೆಗೂ ನಾಲೆಗಳಿಗೆ ನೀರು ಬಿಡುವ ಸಾಧ್ಯತೆ ಕಡಿಮೆ ಇದೆ. ಆದರೆ ವಿಳಂಭವಾದಷ್ಟು ರೈತರು ಬೆಳೆಯುವ ಇಳುವರಿ ಕಡಿಮೆಯಾಗುತ್ತದೆ ಈಗ ಸಕಾಲ ಬೇಗನೆ ನೀರು ಕೊಡಿ ಎಂದು ರೈತರು ಆಗ್ರಹಿಸಿದ್ದಾರೆ.