ಸುದ್ದಿಮೂಲ ವಾರ್ತೆ
ಸೋಲದೇವನಹಳ್ಳಿ,ನ.28: ಚಿತ್ರರಂಗದ ಸಹ ಕಲಾವಿದರು ಹಾಗೂ ತೆರೆಯ ಹಿಂದಿನ ಇತರೇ ತಾಂತ್ರಿಕ ವರ್ಗದವರಿಗೆ ಪಿಂಚಣಿ ನೀಡುವ ಆಲೋಚನೆ ಸರ್ಕಾರದ ಮುಂದಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು .
ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ನಟಿ ಡಾ. ಎಂ.ಲೀಲಾವತಿ ಅವರು ನಿರ್ಮಿಸಿರುವ ಪಶು ಆಸ್ಪತ್ರೆ ಉದ್ಘಾಟನೆಯ ನಂತರ ಅವರ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಚಿಕ್ಕ, ಚಿಕ್ಕ ಕಲಾವಿದರಿಗೆ, ತಂತ್ರಜ್ಞರಿಗೆ ಪಿಂಚಣಿ ಕೊಡಿಸಬೇಕು ಎನ್ನುವುದು ಲೀಲಾವತಿ ಅವರ ದೊಡ್ಡ ಕನಸು. ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಧ್ಯಕ್ಷರ ಮೂಲಕ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮಾತನಾಡಿ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ನಮ್ಮ ಸರ್ಕಾರ ಮಾಡಲಿದೆ ಎಂದು ಹೇಳಿದರು.
ನಮ್ಮ ಕನ್ನಡ ಚಿತ್ರರಂಗದ ನೂರಾರು ಕಲಾವಿದರು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ಬೆಳಗುವ ಕೆಲಸ ಮಾಡುತ್ತಿದ್ದಾರೆ. ಅನೇಕ ಕಲಾವಿದರು ಇಳಿವಯಸ್ಸಿನಲ್ಲಿ ಕಷ್ಟಪಡುತ್ತಿದ್ದಾರೆ. ನಿರ್ಮಾಪಕರು ಸೇರಿದಂತೆ ಚಲನಚಿತ್ರ ಮಂಡಳಿಯವರ ಸಭೆ ಕರೆದು ಸೂಕ್ತ ತೀರ್ಮಾನಕ್ಕೆ ಬರಲಾಗುವುದು. ಲೀಲಾವತಿ ಅವರ ಮನವಿಯನ್ನು ಶೀಘ್ರ ಪರಿಗಣಿಸಲಾಗುವುದು ಎಂದರು.
ಬೆಂಗಳೂರಿಗೆ ಹತ್ತಿರವಾಗಿರುವ ಜಾಗದಲ್ಲಿ ಪಶು ಆಸ್ಪತ್ರೆ ನಿರ್ಮಾಣ ಮಾಡಿರುವುದು ಈ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಪಶುಗಳಿಗೆ ಆಸ್ಪತ್ರೆ ನಿರ್ಮಾಣ ಮಾಡಿ ನಮ್ಮ ಸಮಾಜಕ್ಕೆ ಲೀಲಾವತಿ ಅವರು ಮತ್ತು ಅವರ ಮಗ ವಿನೋದ್ ರಾಜ್ ಅವರು ದೊಡ್ಡ ಸಂದೇಶವನ್ನು ನೀಡಿದ್ದಾರೆ ಎಂದು ಹೇಳಿದರು.
ಸ್ಥಳೀಯರು ಬಗರ್ಹುಕುಂ ಜಮೀನು, ಲೇಔಟ್ಗಳು ಸೇರಿದಂತೆ ಈ ಭಾಗದ ರೈತರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಗಮನ ಸೆಳೆದಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಅವರ ಮನವಿಗಳಿಗೆ ಸ್ಪಂದಿಸಲಾಗುವುದು. ವಿನೋದ್ ರಾಜ್ ಅವರು ನಮ್ಮ ಸಹೋದರನಿದ್ದಂತೆ. ಆಸ್ಪತ್ರೆ ಉದ್ಘಾಟನೆಗೆ ಡಿ.ಕೆ.ಶಿವಕುಮಾರ್ ಮಾತ್ರ ಬಂದಿಲ್ಲ. ಇಡೀ ಸರ್ಕಾರವೇ ಬಂದಿದೆ ಎಂದು ನುಡಿದರು.