ಸುದ್ದಿಮೂಲವಾರ್ತೆ
ಕೊಪ್ಪಳ ಜು 12:ವಿಶ್ವ ಪರಂಪರಾ ಪಟ್ಟಿಯಲ್ಲಿರುವ ಆನೇಗೊಂದಿ ಭಾಗದಲ್ಲಿ ಡ್ರಗ್ ಮಾಫಿಯಾ ಇದೆ ಎಂಬ ಶಾಸಕ ಬಸವರಾಜ ರಾಯರಡ್ಡಿಯ ಹೇಳಿಕೆಯ ನಂತರ ಈ ಭಾಗದಲ್ಲಿ ರಾಯರಡ್ಡಿ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ತಮ್ಮ ಹೇಳಿಕೆಯನ್ನು ಸಮರ್ಥಿಸುವ ಹಿನ್ನೆಲೆ ಪೊಲೀಸ್ ಇಲಾಖೆಯಿಂದ ಇಲ್ಲಿಯ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ.
ಹಂಪಿ ವಿಶ್ವ ಪರಂಪರೆ ಪ್ರದೇಶಾಭಿವೃದ್ದಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಈಗ ತೀವ್ರ ಚರ್ಚೆಯಾಗುತ್ತಿದೆ. ಈ ಮಧ್ಯೆ ಇಲ್ಲಿಯ ಫಾರ್ಮ ಸ್ಟೈ ಹೆಸರಿನಲ್ಲಿ ನಿರ್ಮಿಸಿದ್ದ ರೇಸಾರ್ಟಗಳನ್ನು ತೆರವುಗೊಳಿಸಲಾಗಿದೆ. ಈ ರೇಸಾರ್ಟಗಳು ಇಲ್ಲಿದೆ ಇಲ್ಲಿ ಪ್ರವಾಸಿಗರಿಗೆ ವಾಸ್ತವ್ಯ ಹೂಡಲು ಅವರಿಗೆ ಊಟ, ಉಪಹಾರದ ವ್ಯವಸ್ಥೆಗಾಗಿ ಫಾರ್ಮ ಸ್ಟೈಗಳಿಗೆ ಅವಕಾಶ ನೀಡಬೇಕೆಂದು ಗಂಗಾವತಿ ಶಾಸಕರಾಗಿರುವ ಗಾಲಿ ಜನಾರ್ಧನರಡ್ಡಿ ಸೋಮುವಾರ ವಿಧಾನಸಭೆಯಲ್ಲಿ ಪ್ರಶ್ನೆ ಕೇಳಿದ್ದರು. ಈ ಸಂದರ್ಭದಲ್ಲಿ ಸಚಿವರ ಉತ್ತರದ ಮಧ್ಯೆ ಪ್ರವೇಶಿಸಿದ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಇಲ್ಲಿ ಡ್ರಗ್ ಮಾಫಿಯಾ ನಡೆಯುತ್ತಿದೆ ಎಂದು ಹೇಳಿದ್ದರು. ಈ ಹೇಳಿಕೆಯು ಗಂಗಾವತಿ ಹಾಗು ಆನೇಗೊಂದಿ ಭಾಗದಲ್ಲಿ ತೀವ್ರ ಚರ್ಚೆಗೊಳಗಾಗಿ ರಾಯರಡ್ಡಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಮಧ್ಯೆ ವಿಧಾನಪರಿಷತ್ ಮಾಜಿ ಸದಸ್ಯ ಹೆಚ್ ಆರ್ ಶ್ರೀನಾಥ ರಾಯರಡ್ಡಿ ಮಾನಸಿಕ ರೋಗಿ ಎಂದು ಹೇಳಿಕೆ ನೀಡಿದ್ದರು. ಗಂಗಾವತಿಯಲ್ಲಿ ರಾಯರಡ್ಡಿಯವರ ವಿರುದ್ದ ಪ್ರತಿಭಟನೆ ನಡೆದಿದೆ. ರಾಯರಡ್ಡಿಯವರ ಪ್ರತಿಕೃತಿಗೆ ಚಪ್ಪಲಿ ಹಾಕಿ ಪ್ರತಿಕೃತಿ ದಹಿಸಿದ್ದರು. ಇದರಿಂದಾಗಿ ರಾಯರಡ್ಡಿ ಈಗ ತಮ್ಮ ಹೇಳಿಕೆಯನ್ನು ಸಮರ್ಥಿಸುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಬಸವರಾಜ ರಾಯರಡ್ಡಿ ಗಂಗಾವತಿ ಡಿವಾಯ್ ಎಸ್ಪಿಯವರಿಂದ ಮಾಹಿತಿ ಕೇಳಿದ್ದು. ಡಿವಾಯ್ಎಸ್ಪಿಯವರು ನೀಡಿರುವ ಲಿಖಿತ ಮಾಹಿತಿ ಪ್ರಕಾರ 2018 ರಿಂದ 2023 ರವರೆಗೆ 21 ಅಬಕಾರಿ, 8 ಮಾದಕ ದ್ರವ್ಯ ಮಾರಾಟ, 19 ಇಸ್ಪೇಟ್ ಹಾಗು 22 ಮಟ್ಕಾ ದಂಧೆಯ ಪ್ರಕರಣಗಳು ನಡೆದಿವೆ. ಈ ಪ್ರಕರಣಗಳು ಕೆಲವು ಖುಲಾಸೆಗೊಂಡಿವೆ, ಇನ್ನೂ ಕೆಲವು ವಿಚಾರಣೆ ಹಂತದಲ್ಲಿವೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ವಿಶ್ವವಿಖ್ಯಾತ ಹಂಪಿ ಅಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಒಟ್ಟು 29 ಗ್ರಾಮಗಳಿಗೆ. ಅವುಗಳಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ 15 ಹಳ್ಳಿಗಳಿವೆ. 2003 ರಲ್ಲಿ ಹಂಪಿಯನ್ನು ವಿಶ್ವಪರಂಪರೆ ಪಟ್ಟಿಯಲ್ಲಿ ಸೇರಿಸಲಾಗಿದ್ದು. 2009 ರಲ್ಲಿ ಹಂಪಿ ವಿಶ್ವಪರಂಪರೆ ಪ್ರದೇಶಾಭಿವೃದ್ದಿ ಅಭಿವೃದ್ದಿ ಪ್ರಾಧಿಕಾರ ರಚನೆಯಾಗಿ ಸರಕಾರ ಅಧಿಸೂಚನೆ ಹೊರಡಿಸಿದೆ. ಅಲ್ಲಿಂದ ಇಲ್ಲಿ ಯಾವುದೇ ವ್ಯಪಾರ ಚಟುವಟಿಕೆ ನಡೆಸಲು ಹವಾಮಾ ಪರವಾನಿಗೆ ಪಡೆಯಬೇಕು. ಈ ಮಧ್ಯೆ ಇಲ್ಲಿ ವಿರುಪಾಪುರಗಡ್ಡೆಯಲ್ಲಿ ಅರಣ್ಯ ಪ್ರದೇಶದಲ್ಲಿ ರೇಸಾರ್ಟಗಳನ್ನು ನಿರ್ಮಿಸಲಾಗಿದೆ ಎಂದು ತೆರವುಗೊಳಿಸಲಾಗಿತ್ತು. ಆ ನಂತರ ಈ ಭಾಗದಲ್ಲಿ ಒಟ್ಟು 78 ಫಾರ್ಮ ಸ್ಟೈಗಳನ್ನು ನಿರ್ಮಿಸಿಕೊಂಡಿದ್ದರು. ಹಿಂದಿನ ಸರಕಾರ ರೈತರು ತಮ್ಮ ಕೃಷಿ ಭೂಮಿಯಲ್ಲಿ ಶೇ 10 ರಷ್ಟು ಭೂಮಿಯಲ್ಲಿ ಫಾರ್ಮ ಸ್ಟೈಗಳನ್ನು ನಿರ್ಮಿಸಿ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸಬೇಕೆಂದು ಸೂಚನೆ ನೀಡಿತ್ತು. ಆದರೆ ಫಾರ್ಮ ಸ್ಟೈಗಳು ನಿಯಮ ಬದ್ದವಾಗಿಲ್ಲ ಎಂಬ ಕಾರಣಕ್ಕೆ ಅವುಗಳನ್ನು ಸಹ ತೆರವುಗೊಳಿಸಿದ್ದಾರೆ. ಅದರಲ್ಲಿ 24 ಫಾರ್ಮ ಸ್ಟೈಗಳು ತೆರವುಗೊಳಿಸದಂತೆ ನ್ಯಾಯಲಯದಿಂದ ತಡೆಯಾಜ್ಞೆ ತಂದಿದ್ದಾರೆ. 28 ಫಾರ್ಮ ಸ್ಟೈಗಳನ್ನು ತೆರವುಗೊಳಿಸಿದ್ದು ಉಳಿದ 26 ಸ್ಟೈಗಳಿಗೆ ಬೀಗ ಹಾಕಿದ್ದಾರೆ.
ಈಗ ಅಂಜನಾದ್ರಿ ಹಾಗು ಆನೇಗೊಂದಿ ಭಾಗಕ್ಕೆ ಬರುವ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಹವಾಮಾದಿಂದ ಆನೇಗೊಂದಿ ಪ್ರದೇಶವನ್ನು ಕೈಬಿಡಬೇಕು. ಹವಾಮಾ ನಿಯಮಗಳನ್ನು ಬದಲಾಯಿಸಬೇಕು. ಫಾರ್ಮ ಸ್ಟೈಗಳಿಗೆ ಅವಕಾಶ ನೀಡಬೇಕೆಂದು ಜನಾರ್ಧನರಡ್ಡಿ ಸದನದಲ್ಲಿ ಆಗ್ರಹಿಸಿ ಪ್ರಶ್ನೆ ಕೇಳಿದ್ದರು. ಈ ಸಂದರ್ಭದಲ್ಲಿಯ ಮಾತುಗಳು ಈಗ ತೀವ್ರ ಹೋರಾಟಕ್ಕೆ ಕಾರಣವಾಗಿವೆ. ಇದಕ್ಕೆ ಸರಕಾರ ಏನು ಕ್ರಮ ಕೈಗೊಳ್ಳುತ್ತೊ ಕಾದು ನೋಡಬೇಕು.
ಪ್ರಕರಣ ದಾಖಲು: ಶಾಸಕ ಬಸವರಾಜ ರಾಯರಡ್ಡಿ ವಿರುದ್ದ ಪ್ರತಿಭಟನೆ ಮಾಡಿದ ಆನೇಗೊಂದಿ ರೇಸಾರ್ಟ್ ಮಾಲೀಕರ ವಿರುದ್ದ ಗಂಗಾವತಿ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆನೇಗೊಂದಿ ಭಾಗ ಡ್ರಗ್ ಹಬ್ ಆಗಿದೆ ಎಂಬಂತೆ ರಾಯರಡ್ಡಿ ಮಾತನಾಡಿದ್ದನ್ನು ಖಂಡಿಸಿ ನಿನ್ನೆ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ವೇಳೆ ಸಂಚಾರ ಅಸ್ತವ್ಯಸ್ತ, ಶಾಸಕರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಜಂಗಲಿ ಟ್ರೀ ರೆಸ್ಟೋರೆಂಟ್ ನ ಮ್ಯಾನೇಜರ ಶಿವಸಾಗರ ಸೇರಿ 20 ಜನರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.