ಸುದ್ದಿಮೂಲ ವಾರ್ತೆ
ಕೆ.ಆರ್.ಪುರ, ಅ.31:ಕೆ.ಆರ್.ಪುರ ತೂಗುಸೇತುವೆ ಮೇಲೆ ಸುಮಾರು ಅರವತ್ತು ಆಡಿ ಎತ್ತರದಲ್ಲಿ ಹಾರಾಡುತ್ತಿರುವ ಭಾರತದ ತಿರಂಗ ರಾಷ್ಟ್ರಧ್ವಜ ಹರಿದು ಇಬ್ಭಾಗವಾಗಿರುವ ಕುರಿತು ಸಾಮಾಜಿಕ ಹೋರಾಟಗಾರ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಳೆದ ಆಗಸ್ಟ್ 15ರಂದು ರಾಷ್ಟ್ರಧ್ವಜವನ್ನು ಅರವತ್ತು ಅಡಿ ಎತ್ತರದ ತುದಿಯ ಮೇಲೆ ಕಟ್ಟಲಾಗಿತ್ತು. ಮಳೆ ಗಾಳಿ, ಬಿಸಿಲಿಗೆ ತಿರಂಗ ಬಾವುಟ ಹರಿದು ಇಬ್ಭಾಗವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೂಗುಸೇತುವೆ ನಿರ್ವಹಣೆ ಮಾಡುತ್ತಿದ್ದು ಈ ಬಗ್ಗೆ ಧ್ವಜದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಹೆದ್ದಾರಿ ಪ್ರಾಧಿಕಾರ ರಾಷ್ಟ್ರಧ್ವಜಕ್ಕೆ ಅಪಮಾನ ಎಸಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಡುಗುಡಿ ನಿವಾಸಿಯಾಗಿರುವ ಸಾಮಾಜಿಕ ಹೋರಾಟಗಾರ ಸುಭಾಷ್ ಎಂಬುವವರು ತೂಗುಸೇತುವೆ ಮೇಲೆ ತೆರಳುವಾಗ ಸೇತುವೆ ಮೇಲೆ ಕಟ್ಟಿರುವ ಬಾವುಟ ಹರಿದಿರುವುದನ್ನು ಗಮನಿಸಿದ್ದು ತದನಂತರ ಸ್ಥಳೀಯ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಪ್ರಾಧಿಕಾರದ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ದೇಶದ್ರೋಹಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಷ್ಟ್ರಧ್ವಜವನ್ನು ಧ್ವಜಾರೋಹಣ ಹಾರಾಟ ಮಾಡಿದ ನಂತರ ಸೂರ್ಯಾಸ್ತ ಮುಂಚಿತವಾಗಿ ಕೆಳಗೆ ಇಳಿಸಿ ಮಡಚಿ ಇಡುವುದು ಗೌರವಯುತವಾದ ಪಧ್ಧತಿಯಾಗಿದೆ. ಆದರೆ ರಾಷ್ಟ್ರದ ಪ್ರತೀಕದ ಸಂಕೇತವಾಗಿರುವ ರಾಷ್ಟ್ರ ಧ್ವಜವನ್ನು ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಲವು ತಿಂಗಳುಗಳಿಂದ ತೂಗು ಸೇತುವೆ ಮೇಲೆ ಕಟ್ಟಿರುವ ರಾಷ್ಟ್ರಧ್ವಜ ಹರಿದು ಇಬ್ಭಾಗವಾಗಿದೆ. ಈ ಕುರಿತು ಇದಕ್ಕೆ ಕಾರಣರಾದವರ ಮೇಲೆ ಕ್ರಮ ಜರುಗಿಸುವಂತೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಸುಭಾಷ್ ತಿಳಿಸಿದರು.