ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.11: ಕೇಂದ್ರ ಕಚೇರಿಯ ಆವರಣದಲ್ಲಿರುವ ಗುಣಮಟ್ಟ ನಿಯಂತ್ರಣ ವಿಭಾಗದ ಲ್ಯಾಬ್ ಮತ್ತು ಕಚೇರಿ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ 10 ಮಂದಿ ಸಿಬ್ಬಂದಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಮಹತ್ವದ ದಾಖಲೆಗಳು ಸುಟ್ಟುಹೋಗಿವೆ ಎಂದು ಹೇಳಲಾಗುತ್ತಿದೆ.
ಗುಣಮಟ್ಟ ನಿಯಂತ್ರಣ ವಿಭಾಗದ ಲ್ಯಾಬ್ ಮತ್ತು ಕಚೇರಿ ಕಟ್ಟಡದಲ್ಲಿ ಆಕಸ್ಮಿಕವಾಗಿ ಈ ಬೆಂಕಿ ಅವಘಡ ಸಂಭವಿಸಿದೆ. ಲ್ಯಾಬ್ನಲ್ಲಿ ಮೈಕ್ರೋವೆವನ್ ಸ್ಫೋಟದಿಂದ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಅಗ್ನಿ ಅವಘಡದಲ್ಲಿ ಏಳು ಜನ ಇಂಜಿನಿಯರ್ಸ್ ಸೇರಿ ಸುಮಾರು 10 ಮಂದಿಗೆ ಗಾಯಗಳಾಗಿವೆ. ಕೂಡಲೇ ಅವರನ್ನು ಕಟ್ಟಡದಿಂದ ಹೊರಗೆ ಕರೆತಂದು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಿಸಲಾಗಿದೆ. ತೀವ್ರ ಸುಟ್ಟ ಗಾಯಗಳಾದಂತಹ ಸಿಬ್ಬಂದಿಗೆ ಸೇಂಟ್ ಮಾರ್ಥಾಸ್ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಖ್ಯ ಅಭಿಯಂತರ ಶಿವಕುಮಾರ್, ಕಾರ್ಯಪಾಲಕ ಅಭಿಯಂತರರಾದ ಕಿರಣ್, ಸಂತೋಷ್ ಕುಮಾರ್, ವಿಜಯಮಾಲ, ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀಧರ್, ಪ್ರಥಮ ದರ್ಜೆ ಸಹಾಯಕ ಕಿರಣ್, ಆಪರೇಟರ್ ಜ್ಯೋತಿ, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಶ್ರಿನಿವಾಸ್, ಗಣಕಯಂತ್ರ ನಿರ್ವಾಹಕ ಮನೋಜ್ ಅಗ್ನಿ ಸೇರಿದಂತೆ ಹಲವು ಗಾಯಗೊಂಡಿದ್ದಾರೆ. ಮುಖ್ಯ ಅಭಿಯಂತರ ಶಿವಕುಮಾರ್ ಅವರನ್ನು ನೇರವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ 8 ಮಂದಿಗೆ ಮಾರ್ಥಾಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ವಿಕ್ಟೋರಿಯಾಗೆ ಕಳುಹಿಸಲಾಗಿದೆ.
ಇಟ್ಟಿಗೆ, ಟಾರ್, ಸೇರಿದಂತೆ ಬಿಬಿಎಂಪಿ ಕಾಮಗಾರಿಗಳಿಗೆ ಬಳಸುವ ಪ್ರತಿಯೊಂದು ವಸ್ತುಗಳ ಗುಣಮಟ್ಟ ಪರಿಶೀಲನೆ ಮಾಡುವಂತಹ ಗುಣನಿಯಂತ್ರಣ ಪ್ರಯೋಗಾಲಯ ಮತ್ತು ಕಚೇರಿ ಇದಾಗಿದ್ದು, ಅಲ್ಲಿ ಸಂಜೆ ವೇಳೆ ಇದ್ದಕ್ಕಿದ್ದಂತೆ ಬಾರಿ ಬೆಂಕಿ, ದಟ್ಟ ಹೊಗೆ ಕಾಣಿಸಿಕೊಂಡಿದೆ. ಘಟನೆ ಸಂಭವಿಸಿ ಅರ್ಧ ಗಂಟೆ ಬಳಿಕ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಗುಣನಿಯಂತ್ರಣ ಪ್ರಯೋಗಾಲಯದಲ್ಲಿ ಕೆಲವು ಪ್ರಮುಖ ಕಡತಗಳನ್ನು ಸಹ ಇಡಲಾಗಿತ್ತು. ಬೆಂಕಿ ಅವಘಡದಿಂದಾಗಿ ಆ ಕಡತಗಳೆಲ್ಲವೂ ನಾಶಗೊಂಡಿವೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, “ಸಂಜೆ 5.30ರ ಸುಮಾರಿಗೆ ಕಚೇರಿಯಲ್ಲಿ ಕೂತಿದ್ದಾಗ ವಿದ್ಯುತ್ ಕಡಿತವಾಯಿತು. ಆಗ ಹಿಂದಿನ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಯಿತು. ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಹೀಗಾಗಿ, ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಗಾಯಗೊಂಡರು. ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಂಬ್ಯುಲೆನ್ಸ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಘಟನೆ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಿಬಿಎಂಪಿ ಕಟ್ಟಡದಲ್ಲಿ ಅಗ್ನಿ ಅನಾಹುತದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಚಿವ ಬೈರತಿ ಸುರೇಶ್ ಅವರಿಗೆ ಸ್ಥಳಕ್ಕೆ ಭೇಟಿ ನೀಡುವಂತೆ ಸೂಚಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಬ್ಬಂದಿ ಆರೋಗ್ಯ ಮುಖ್ಯ. ಏನೇನು ದಾಖಲೆಗಳು ನಾಶವಾಗಿವೆ ಎಂಬುದನ್ನು ನಂತರದಲ್ಲಿ ಪರಿಶೀಲಿಸಲಾಗುವುದು’ ಎಂದು ಹೇಳಿದರು.