ಸುದ್ದಿಮೂಲ ವಾರ್ತೆ
ಬೆಂಗಳೂರು, ಮಾ. 21: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಗತ್ಯ ಕ್ರಮಗಳನ್ನು ಸೂಚಿಸಿ ಸುತ್ತೋಲೆ ಹೊರಡಿಸಿದೆ. ರಾಜ್ಯದಲ್ಲಿ ಕಳೆದ ಐದು ತಿಂಗಳಿನಿಂದ ಪ್ರಕರಣ ನಿಯಂತ್ರಣದಲ್ಲಿದ್ದರೂ ಸಹ ರಾಜ್ಯದ ಕೋವಿಡ್ 19 ಪಾಸಿಟಿವಿಟಿ ಪ್ರಮಾಣ ಶೇ2.77 ಇದೆ. ದೇಶದ ಪಾಸಿಟಿವಿಟಿ ಪ್ರಮಾಣ ಶೇ. 0.61 ಇದೆ. ಕೆಲವು ವಾರಗಳಿಂದೀಚೆಗೆ ಶಿವಮೊಗ್ಗ, ಕಲಬುರ್ಗಿ, ಮೈಸೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಕೋವಿಡ್ 19 ಪರಿಸ್ಥಿತಿಯನ್ನು ಸೂಕ್ತ ನಿಗಾದಲ್ಲಿರಿಸಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕೆಲವು ಸಲಹೆಗಳನ್ನು ನೀಡಿ ಆರೋಗ್ಯ ಇಲಾಖೆ ಕಾರ್ಯದರ್ಶಿ ಟಿ.ಕೆ. ಅನಿಲ್ಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ. ಅವರು ನೀಡಿದ ಸಲಹೆಗಳು ಹೀಗಿವೆ. * ನಿಗದಿತ ಗುರಿಯಂತೆ ಕೋವಿಡ್ 19 ಪ್ರಕರಣಗಳ ಪರೀಕ್ಷೆ ನಡೆಸಬೇಕು * ಹೊಸದಾಗಿ ಹಾಗೂ ಕ್ಲಸ್ಟರ್ ಮಾದರಿಯಲ್ಲಿ ವರದಿಯಾಗುವ ಪ್ರಕರಣಗಳ ಮೇಲ್ವಿಚಾರಣೆ ಮಾಡುವುದು * ಸೋಂಕು ಹರಡುವುದನ್ನ ತಡೆಗಟ್ಟಲು ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ನಿಯಮಿತವಾಗಿ ಎಚ್ಚರಿಕೆ ಚಿಹ್ನೆಗಳನ್ನು ಐಎಲ್ಐ ಹಾಗೂ ಪ್ರಕರಣಗಳನ್ನು ಪತ್ತೆಹಚ್ಚಿ ಉಸ್ತುವಾರಿ ಮಾಡಬೇಕು * ಅಂತಾರಾಷ್ಟ್ರೀಯ ಪ್ರಯಾಣಿಕರು, ಸ್ಥಳೀಯವಾಗಿ ವರದಿಯಾಗುವ ಕ್ಲಸ್ಟರ್ ಪ್ರಕರಣಗಳು ಹಾಗೂ ಸೆಂಟಿನಲ್ ಸೈಟ್ಗಳಲ್ಲಿ ಸಂಗ್ರಹಿಸಲಾಗುವ ಮಾದರಿಗಳನ್ನು ಚಾಲ್ತಿಯಲ್ಲಿರುವ ಶಿಷ್ಟಾಚಾರದಂತೆ ಜಿನೋಮ್ ಸೀಕ್ವೆನ್ಸಿಂಗ್ ನಡೆಸಬೇಕು. * ಅರ್ಹ ಜನರಿಗೆ ಮುನ್ನೆಚ್ಚರಿಕಾ ಲಸಿಕೆ (ಪ್ರಿಕಾಷನ್ ಡೋಸ್) ನೀಡುವ ಪ್ರಮಾಣ ಹೆಚ್ಚಿಸಬೇಕು * ಜನಸಂದಣಿ ಇರುವ ಪ್ರದೇಶಗಳಲ್ಲಿ ಕೋವಿಡ್ ನಿಯಮಗಳ ಪಾಲನೆ ಖಚಿತಪಡಿಸಿಕೊಳ್ಳಬೇಕು.