ಆಹಾರ ಪದಾರ್ಥಗಳನ್ನು ವ್ಯರ್ಥ ಮಾಡದಿರಿ: ಇದು ಆಹಾರ ಸಚಿವ ಕೆ ಎಚ್ ಮುನಿಯಪ್ಪ ಕಳಕಳಿ
ಸುದ್ದಿಮೂಲ ವಾರ್ತೆ
ಬೆಂಗಳೂರು,ಜೂ.13: ತುತ್ತು ಅನ್ನವನ್ನೂ ನಾವು ವ್ಯರ್ಥ ಮಾಡಬಾರದು. ಈ ನಿಟ್ಟಿನಲ್ಲಿ ದೊಡ್ಡ ಮಟ್ಟದ ಸಾರ್ವಜನಿಕ ಜಾಗೃತಿ ನಡೆಯಬೇಕಿದೆ ಎಂದು
ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಹೆಚ್.ಮುನಿಯಪ್ಪ ಕರೆ ನೀಡಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಬಹು ನಿರೀಕ್ಷಿತ ಮೂರು ದಿನಗಳ ವರ್ಲ್ಡ್ ಆಫ್ ಹಾಸ್ಪಿಟಾಲಿಟಿ ಎಕ್ಸ್ಪೋ (ಆತಿಥ್ಯ ಪ್ರಪಂಚ ಪ್ರದರ್ಶನ) ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಹಸಿವೆಯ ನಿವಾರಣೆ ನಮ್ಮೆಲ್ಲರ ಗುರಿ. ಈ ನಿಟ್ಟಿನಲ್ಲಿ ನಾವು ಆಹಾರ ವ್ಯರ್ಥ ಮಾಡುವುದನ್ನು ನಿಲ್ಲಿಸಬೇಕು, ಎಂದು ಅವರು ಹೇಳಿದರು.
ಮುಂಬೈ ಮತ್ತು ಗೋವಾದಲ್ಲಿ ಯಶಸ್ವಿ ಪ್ರದರ್ಶನಗಳ ನಂತರ, ವರ್ಲ್ಡ್ ಆಫ್ ಹಾಸ್ಪಿಟಾಲಿಟಿ
ಎಕ್ಸ್ಪೋ (ಆತಿಥ್ಯ ಪ್ರಪಂಚ ಪ್ರದರ್ಶನ) ನಗರದಲ್ಲಿ ನಡೆಯುತ್ತಿದ್ದು, ಮೂರು ದಿನಗಳ ಕಾಲ ನಡೆಯುವ ಈ ಪ್ರದರ್ಶನ ಆತಿಥ್ಯ ಕ್ಷೇತ್ರದ ವೃತ್ತಿಪರರಿಗೆ ಉದ್ಯಮದಲ್ಲಿನ ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ಪರಿಚಯಿಸಲು ಸೂಕ್ತ ವೇದಿಕೆಯಾಗಿದೆ. ಪ್ರಸಿದ್ಧ ಇನ್ಕ್ರೆಡಿಬಲ್
ಚೆಫ್ ಚಾಲೆಂಜ್ (ICC) ಸ್ಪರ್ಧೆಯು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲೊಂದು.
ಕೋವಿಡ್ ಸವಾಲು ಬಹುತೇಕ ತಗ್ಗಿದೆ. ಆದರೆ ಅದು ಸೃಷ್ಟಿಸಿದ ಸವಾಲುಗಳಾದ ನಿರುದ್ಯೋಗ, ಆರ್ಥಿಕ ಕುಸಿತ ಇತ್ಯಾದಿಗಳು ಇನ್ನೂ ಸಂಪೂರ್ಣ ನಿವಾರಣೆ ಆಗಬೇಕಿದೆ. ಈ ಹಿನ್ನಲೆಯಲ್ಲಿ ನಾವು ಅಭಿವೃದ್ಧಿಯ ಹೊಸ ದಾರಿಗಳನ್ನು ಕಂಡುಕೊಂಡು ಸಮಾಜ, ಹಾಗು ಆರ್ಥಿಕತೆ ಬಲಪಡಿಸಬೇಕಿದೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಅವರು ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಕ್ಕೆ ಎಲ್ಲ ರೀತಿಯ ಸಹಾಯ ಮಾಡಲು ರಾಜ್ಯ ಸರಕಾರ ಸದಾ ಸಿದ್ಧವಿದೆ ಎಂದು ತಿಳಿಸಿದರು. ಕೋವಿಡ್ ಹಾವಳಿ ಬಳಿಕ ನಿಧಾನವಾಗಿ ಚೇತರಿಕೆ ಕಾಣುತ್ತಿರುವ ರಾಜ್ಯದ ಆರ್ಥಿಕತೆ ಬಲವರ್ಧನೆಗೆ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಕ್ಕೆ ಅಗತ್ಯ ಬೆಂಬಲ ನೀಡಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ಅವರು ಘೋಷಿಸಿದರು. ಈ ಕ್ಷೇತ್ರಕ್ಕೆ ಸಂಬಂಧಿಸಿದ ನೀತಿ ನಿಯಮಾವಳಿಗಳಲ್ಲಿ ಅಗತ್ಯ ಸುಧಾರಣೆಗೆ ರಾಜ್ಯ ಸರಕಾರ ಬದ್ಧವಾಗಿದೆ ಎಂದು ಸಚಿವರು ತಿಳಿಸಿದರು. ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಗಳು ರಾಜ್ಯದ ಬೊಕ್ಕಸಕ್ಕೆ ಅಮೂಲ್ಯವಾದ ಆದಾಯದ ಜೊತೆಗೆ ಸ್ಥಳೀಯವಾಗಿ ಉದ್ಯೋಗಗಳನ್ನು ಸೃಷ್ಟಿಸುವ ದೊಡ್ಡ ಸಾಮರ್ಥ್ಯವನ್ನು ಹೊಂದಿವೆ ಎಂದು ತಿಳಿಸಿದ ಅವರು, ಕೋವಿಡ್ 19 ಸೃಷ್ಟಿಸಿದ ನಿರುದ್ಯೋಗ ಮತ್ತಿತರ ಸವಾಲುಗಳನ್ನು ಎದುರಿಸಲು ಈ ಎರಡು ಕ್ಷೇತ್ರಗಳು ಪ್ರಮುಖವಾಗಿವೆ ಎಂದು ಅವರು ಹೇಳಿದರು.
ಕರ್ನಾಟಕ ಸರ್ಕಾರವು ಆರ್ಥಿಕ ಪ್ರಗತಿಯ ನಿಟ್ಟಿನಲ್ಲಿ ಕ್ರಾಂತಿಕಾರಿ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಮೂರೂ ದಿನಗಳ ಸಮ್ಮೇಳನವು ಈ ಕ್ಷೇತ್ರದ ಎಲ್ಲರನ್ನು ಒಟ್ಟುಗೂಡಿಸಿ, ಒಂದೇ ವೇದಿಕೆಗೆ ತರುವ ಮೂಲಕ ಉತ್ತಮ ಕೆಲಸವನ್ನು ಮಾಡುತ್ತಿದೆ ಎಂದು ಅವರು ಶ್ಲಾಘಿಸಿದರು.
ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಗಳು ನಿಜವಾದ ಅರ್ಥದಲ್ಲಿ, ನಮ್ಮಲ್ಲಿ ಬಹುಆಯಾಮದ ಅಭಿವೃದ್ಧಿಯನ್ನು ಹೆಚ್ಚಿಸುತ್ತವೆ. ಇದು ಎಲ್ಲರ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಿದೆ, ಎಂದು ಅವರು ಹೇಳಿದರು. ಕರ್ನಾಟಕವು ಈ ಕ್ಷೇತ್ರದಲ್ಲಿ ದೊಡ್ಡ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಇನ್ನಷ್ಟು ಉತ್ತಮವಾಗಿ ಬಳಸಿಕೊಳ್ಳಬೇಕಿದೆ, ಎಂದು ಅವರು ಹೇಳಿದರು.
ಅಭಿವೃದ್ಧಿಯಲ್ಲಿ ಕರ್ನಾಟಕದಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸಲು ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರ ಇನ್ನಷ್ಟು ಬೆಳವಣಿಗೆ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲಾ ರೀತಿಗಳಲ್ಲೂ ಈ ಕ್ಷೇತ್ರಗಳನ್ನು ಬೆಂಬಲಿಸಲು ಕಟಿಬದ್ಧವಾಗಿದೆ ಎಂದೂ ಸಚಿವರು ಭರವಸೆ ನೀಡಿದರು.
ಬೃಹತ್ ಬೆಂಗಳೂರು ಹೋಟೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ಪಿಸಿ ರಾವ್, ಎಫ್ ಕೆ ಸಿ ಸಿ ಐ ಅಧ್ಯಕ್ಷ ಬಿ ವಿ ಗೋಪಾಲ ರೆಡ್ಡಿ, ಜಿತೇಂದ್ರ ಡೋಂಗ್ರೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.