ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.14: ಹಿಂದುಳಿದ ವರ್ಗಗಳ ಯುವಕರ ಶಕ್ತಿ ಎಚ್. ಎಂ. ರೇವಣ್ಣ ಅವರನ್ನು ರಾಜ್ಯದ ಮೂಲೆ ಮೂಲೆಗಳಿಂದ ಬಂದು ಭೇಟಿಯಾಗುವುದನ್ನು ನಾವು ದಿನನಿತ್ಯ ಅವರ ನಿವಾಸದಲ್ಲಿ ಕಾಣಬಹುದು.ಅಧಿಕಾರ ಇರಲಿ ಬಿಡಲಿ ಅಧಿಕಾರದಲ್ಲಿರುವವರಿಗೆ ಮತ್ತು ಜನಸಾಮಾನ್ಯರಿಗೆ ಒಂದು ರೀತಿ ಸೇತುವೆ ಎಂದರೆ ತಪ್ಪಾಗಲಾರದು ಎಂದು ಕಾಂಗ್ರೆಸ್ ಮುಖಂಡ ಮನೋಹರ್ ಎಸ್.ಎಮ್ ತಿಳಿಸಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ‘ಇಂತಹ ವ್ಯಕ್ತಿಯನ್ನು ಕಾಂಗ್ರೆಸ್ ಪಕ್ಷ ಖಂಡಿತವಾಗಿಯೂ ಉಳಿಸಿಕೊಳ್ಳುತ್ತದೆ ಎಂಬುದು ನಮ್ಮ ಅನಿಸಿಕೆ, ಯಾವುದೇ ಕ್ಷೇತ್ರಕ್ಕೆ ಅಥವಾ ಯಾವುದೇ ಸ್ಥಾನಕ್ಕೆ ಅಂಟಿಕೊಳ್ಳದೆ, ಸದಾ ಪಕ್ಷಕ್ಕೆ ಮತ್ತು ನೊಂದವರ ಪರ ಯಾವುದಾದರೂ ರಾಜಕಾರಣಿ ಮುಂಚೂಣಿಯಲ್ಲಿದ್ದರೆ ಅದು ನಮ್ಮ ರೇವಣ್ಣ ಸಾಹೇಬರು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
‘ಕಾಂಗ್ರೆಸ್ ಪಕ್ಷದ ಮೇಲೆ ನಮಗೆ ವಿಶ್ವಾಸವಿದೆ. ಎರಡು ಬಾರಿ ಮಾಗಡಿಯಿಂದ ಚುನಾಯಿತರು, ಸಿದ್ದರಾಮಯ್ಯನವರ ಸಂಪುಟದಲ್ಲಿ ಮಂತ್ರಿಯಾಗಿದ್ದವರು, ದಿಲ್ಲಿಯಿಂದ ಕರ್ನಾಟಕದವರೆಗೆ ತಮ್ಮದೇ ವರ್ಚಸ್ಸನ್ನು ಕಾಪಾಡಿಕೊಂಡು ಬಂದಿರುವ ಏಕೈಕ ನಾಯಕ ಎಚ್.ಎಂ. ರೇವಣ್ಣ ಅವರು, ಇಂತಹ ಜನರ ಧ್ವನಿಯನ್ನು ಪಕ್ಷ ಎತ್ತಿ ಹಿಡಿಯುತ್ತದೆ ಎಂಬ ವಿಶ್ವಾಸದಿಂದ, ನಮ್ಮ ಮನವಿಯನ್ನು ಪಕ್ಷದ ಮುಂದೆ ಇಡಲು ಇಚ್ಚಿಸುತ್ತೇನೆ’ ಎಂದರು.
‘ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಹಿರಿಯ ನಾಯಕರು ಈ ಬಗ್ಗೆ ಚಿಂತನೆ ನಡೆಸಿ ಅವರು ಕರ್ನಾಟಕದಲ್ಲಿ ಬಯಸಿದ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿಸಲು ಮನವಿ ಮಾಡುತ್ತೇನೆ ಎಂದು ಕಾಂಗ್ರೆಸ್ ವರಿಷ್ಠರನ್ನು ಒತ್ತಾಯಿಸಿದರು.