ಸುದ್ದಿಮೂಲ ವಾರ್ತೆ
ಬಾಗಲಕೋಟೆ,ಮೇ17; ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕು ಶಾಸಕ, ಪಕ್ಷದ ಹಿರಿಯ ರಾಜಕಾರಣಿ ವಿಜಯಾನಂದ ಕಾಶಪ್ಪನವರ್ ಅವರಿಗೆ ಸಚಿವ ಸ್ಥಾನ ನೀಡಬೇಕು.
ಲಿಂಗಾಯತ ಪಂಚಮಶಾಲಿ ಜನಾಂಗದ ನಾಯಕರಾಗಿರುವ ಕಾಶಪ್ಪನವರ್ ಗೆ ಅವಕಾಶ ಕಲ್ಪಿಸಬೇಕು. ಈ ಮೂಲಕ ಬಾಗಲಕೋಟೆ ಜಿಲ್ಲೆಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕೆಂದು ಇಳಕಲ್ಲ ತಾಲ್ಲೂಕು ಲಿಂಗಾಯತ ಪಂಚಮಸಾಲಿ ಅಧ್ಯಕ್ಷ ಮಹಾತಗೌಡ ಪಾಟೀಲ, ಹುನಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಂಗಾದರ ದೊಡ್ಡಮನಿ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಡಿಯಲ್ಲಿ ಮಾತನಾಡಿ, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ವಿಜಯಾನಂದ ಕಾಶಪ್ಪನವರ್ ನೇತೃತ್ವದಲ್ಲಿ ನಡೆದ ಹೋರಾಟದಿಂದ ಬಾಗಲಕೋಟೆ ಜಿಲ್ಲೆಯಲ್ಲಿ 5 ವಿಧಾನ ಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧ್ಯವಾಗಿದೆ ಎಂದು ಹೇಳಿದರು.
ವಿಜಯಾನಂದ ಕಾಶಪ್ಪನವರ್ ಹುನಗುಂದ ಕ್ಷೇತ ಕ್ಷೇತ್ರದಿಂದ 2 ನೇ ಬಾರಿ ಆಯ್ಕೆಯಾಗಿದ್ದಾರೆ. ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾಗಿ ರಾಜ್ಯದಾದ್ಯಂತ 700 ಕಿ.ಮೀ ಪಾದಯಾತ್ರೆ ಮಾಡಿ ಪಂಚಮಶಾಲಿ ಸಮುದಾಯವನ್ನು ಸಂಘಟನೆ ಮಾಡಿರುವುದರಿಂದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆಯಲು ಸಾಧ್ಯವಾಗಿದೆ. ಎನ್ಆರ್ಸಿ, ಸಿಆರ್ಎನ್ ರದ್ದಿಗಾಗಿ ಇಳಕಲ್ ನಿಂದ
ಬಿಜಾಪುರ ವರೆಗೆ ಪಾದಯಾತ್ರೆ ಮಾಡಿದ್ದಾರೆ.
ಕಳೆದ 20 ವರ್ಷದಿಂದ ಹುನಗುಂದ ಕ್ಷೇತ ಅಧಿಕಾರ ವಂಚಿತವಾಗಿದೆ. ಸ್ವಾಂತಂತ್ರ ನಂತರ ಸಿ.ಎಸ್.ಆರ್. ಕಂಠಿ, ಎಸ್.ಬಿ. ನಾಗರಾಳ ಮತ್ತು ಎಸ್.ಆರ್. ಕಾಶಪ್ಪನವರ್ ಮಾತ್ರ ಸಚಿವರಾಗಿದ್ದು ನಂತರ ಯಾವುದೇ ಸ್ಥಾನ ಮಾನ ಸಿಕ್ಕಿಲ್ಲ.
ವಿಜಯಾನಂದ ಕಾಶಪ್ಪನವರ್ ತಂದೆ ಎಸ್.ಆರ್. ಕಾಶಪ್ಪನವರ್ 3 ಬಾರಿ ವಿಧಾನ ಸಭೆಗೆ ಆಯ್ಕೆಯಾಗಿ ಸಚಿವರಾಗಿದ್ದರು. ತಾಯಿ ಗೌರಮ್ಮ ಕಾಶಪ್ಪನವರು ಸಹ 1 ಬಾರಿ ವಿಧಾನ ಸಭೆಗೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರು ಕಳೆದ 40 ವರ್ಷಗಳಿಂದ ಪಕ್ಷಕ್ಕೆ ನಿಷ್ಠೆಯಿಂದ ಸೇವೆ
ಸಲ್ಲಿಸುವುದರ ಜೊತೆಗೆ ಕಾಶಪ್ಪನವರ್ ಕುಟುಂಬ ಪಕ್ಷವನ್ನು ಗಟ್ಟಿಗೊಳಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಳಕಲ್ಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ದುಲ್ ರಜಾಕ್ ತಟಗಾರ್, ಕರ್ನಾಟಕ ರಾಜ್ಯ ಬೋವಿ ವಡ್ಡರ್ ಮಹಾಸಭಾ ರಾಜ್ಯ ಕಾರ್ಯದರ್ಶಿ ಹುಲ್ಲಪ್ಪ ಹಳ್ಳೂರ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಿತ ರಕ್ಷಣಾವೇದಿಕೆ ಕಾರ್ಯದರ್ಶಿ ಸುರೇಶ್ ಜಂಗ್ಲಿ, ಮಡಿವಾಳ ಮಾಚಿದೇವ ಸಮಾಜ ಅಧ್ಯಕ್ಷ ವಿರೇಶ್ ಮಡಿವಾಳರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮಹಾಂತೇಶ್ ನರಗುಂದ್ ಉಪಸ್ಥಿತರಿದ್ದರು.