ಸುದ್ದಿಮೂಲ ವಾರ್ತೆ
ತಿಪಟೂರು,ಆ.29: ನಗರದ ಕೋಟೆಯಲ್ಲಿರುವ ಸರ್ಕಾರಿ ಶಾಲೆಯು ಹೆಸರು ವಾಸಿಯಾದ ಶಾಲೆಯಾಗಿದ್ದು ಆದರೆ ಕಳೆದ ಹತ್ತು ವರ್ಷಗಳಿಂದ ಮುಚ್ಚಿರುವುದು ಬೇಸರದ ಸಂಗತಿ. ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿದ್ದು ಜನಪ್ರತಿನಿಧಿಗಳು ಈ ಶಾಲೆಯನ್ನು ಪುನರ್ ಆರಂಭಿಸಬೇಕೆಂದು ನಿವೃತ್ತ ಶಿಕ್ಷಕಿ ಶ್ರೀಮತಿ ಮನವಿ ಮಾಡಿದರು.
ನಗರದ ಕೋಟೆಯಲ್ಲಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ 1995-96ನೇ ಸಾಲಿನ ಹಳೇ ವಿದ್ಯಾರ್ಥಿಗಳು ಆಯೋಜನೆ ಮಾಡಿದ್ದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋಟೆ ಶಾಲೆಯ ಮಕ್ಕಳು ಒಂದು ಕಾಲದಲ್ಲಿ ಪಠ್ಯ ಚುಟುವಟಿಕೆಗಳಿಗೆ ಮಾತ್ರ ಸೀಮಿತವಾಗದೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನುಪಡೆದುಕೊಂಡಿದ್ದರು.
ನೂರಾರು ಮಕ್ಕಳಿಗೆ ಈ ಶಾಲೆ ಪಾಠ ಕಲಿಸಿದ್ದು ನಾನು ಇದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾಗಿದ್ದು ಇಲ್ಲಿ ಕಲಿಕೆಗೆ ಉತ್ತಮ ವಾತಾವರಣವಿದ್ದು ಸ್ಥಳೀಯ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಶಾಲೆಯನ್ನು ಪುನರ್ ಆರಂಭಿಸಬೇಕು. ಇದರಿಂದ ಇಲ್ಲಿನ ಸ್ಥಳೀಯ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.
ರೈತ ಸಂಘದ ಮುಖಂಡ ಬಿ. ಯೋಗೀಶ್ವರಸ್ವಾಮಿ ಮಾತನಾಡಿ, ಕೋಟೆ ಶಾಲೆಯ ಸ್ನೇಹ ಬಳಗದ ಮೂಲಕ ಕೋಟೆ ಶಾಲೆಯ ಹಳೆಯ ಶಿಕ್ಷಕರನ್ನು ಹಾಗೂ ಹಳೆ ವಿದ್ಯಾರ್ಥಿಗಳನ್ನು ಭೇಟಿ ಮಾಡುವ ಸದಾವಕಾಶ ದೊರೆತಿದೆ. ಕೋಟೆ ಶಾಲೆಯ ವಾಲಿಬಾಲ್ ತಂಡ ರಾಜ್ಯಮಟ್ಟದಲ್ಲಿ ಹೆಸರು ವಾಸಿಯಾಗಿತ್ತು ಎಂದು ನೆನಪನ್ನು ಮೆಲುಕು ಹಾಕಿದರು.
ಕುಮಾರ್ ಆಸ್ಪತ್ರೆಯ ಡಾ. ಶ್ರೀಧರ್ ಮಾತನಾಡಿ, ನಗರದ ಪ್ರಮುಖ 3 ವಾರ್ಡ ಗಳಲ್ಲಿರುವ ಬಡ ಮಕ್ಕಳಿಗೆ ಈ ಶಾಲೆಯು ಅವಶ್ಯಕವಿರುವುದರಿಂದ ಸರ್ಕಾರ ಈ ಶಾಲೆಯನ್ನು ಆಸಕ್ತ ಸಂಘ ಸಂಸ್ಥೆಗಳಿಗೆ ದತ್ತು ನೀಡಿದರೇ ಶಾಲೆ ಪುನರ್ ಪ್ರಾರಂಭವಾಗಿ ಸಾವಿರಾರು ಬಡ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.
ಸಮಾರಂಭದಲಿ ನಿವೃತ್ತ ಶಿಕ್ಷಕರಾದ ಎಸ್.ಎನ್. ಸಿದ್ದರಾಮಯ್ಯ, ಬಿ.ಕೆ. ಶ್ರೀಕಂಠಯ್ಯ, ಹೆಚ್.ಎನ್. ಶಿವಲಿಂಗಯ್ಯ, ಶಂಭಮ್ಮ, ವಿಜಯಲಕ್ಷ್ಮೀ,, ಸರ್ವಮಂಗಳಮ್ಮ, ಶಿಕ್ಷಕರಾದ ಶಶಿಧರ್, ಮೇರಿ, ಮೀನಾಕ್ಷಮ್ಮ, ರಾಧಾ, ಹಳೆಯ ವಿದ್ಯಾರ್ಥಿಗಳಾದ ಮಧು, ಸುದರ್ಶನ್ ಎಸ್ ಶೆಟ್ಟಿ, ದೊರೆಸ್ವಾಮಿ, ನಾಗರತ್ನ, ಮಂಜುಳ, ಟಿ.ಎಸ್. ಮಂಜುನಾಥ್, ಕುಸುಮ, ಶಿವಕುಮಾರ್, ಧನಲಕ್ಷ್ಮಿ, ವಿಜಯಕುಮಾರ್, ಟಿ.ಆರ್. ಗಿರೀಶ್ ಮತ್ತಿತರರಿದ್ದರು.