ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.2: ಪಾಶ್ಚಿಮಾತ್ಯ ರಾಷ್ಟ್ರಗಳು ಇತರ ದೇಶಗಳ ಆಂತರಿಕ ವಿಷಯಗಳಲ್ಲಿ ಮೂಗು ತೂರಿಸುವದನ್ನು ನಿಲ್ಲಿಸಬೇಕು, ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹಗೊಳಿಸುವಿಕೆಗೆ ಅಮೆರಿಕ ಮತ್ತು ಜರ್ಮನಿ ಸ್ಪಂದನೆ ಅನಗತ್ಯ ಎಂದು ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ ಹೇಳಿದರು.
ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ ಮತ್ತು ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ನೇತೃತ್ವದಲ್ಲಿ ಕಬ್ಬನ್ ಪಾರ್ಕ್ನಲ್ಲಿ ಆಯೋಜಿಸಲಾಗಿದ್ದ ಯುವ ಮತದಾರರು, ವಾಯು ವಿಹಾರಿಗಳೊಂದಿಗೆ ಆಯೋಜನೆಗೊಂಡಿದ್ದ ಮೀಟ್ ಅಂಡ್ ಗ್ರೀಟ್ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.
ಪಶ್ಚಿಮದ ರಾಷ್ಟ್ರಗಳು ತಮ್ಮ ಹಿತಾಸಕ್ತಿಗೆ ಅನುಗುಣವಾದ ಅಭಿಪ್ರಾಯಗಳನ್ನು ಇತರ ದೇಶಗಳ ಮೇಲೆ ಹೇರುವುದನ್ನು ನಿಲ್ಲಿಸುವ ಅಗತ್ಯವಿದೆ ಎಂದು ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ ಹೇಳಿದರು.
ರಾಹುಲ್ ಗಾಂಧಿ ಸಂಸದ ಸ್ಥಾನಕ್ಕೆ ಅನರ್ಹಗೊಂಡ ಪ್ರಕ್ರಿಯೆಗೆ ಅಮೆರಿಕ ಮತ್ತು ಜರ್ಮನಿ ದೇಶಗಳು ನೀಡಿರುವ ಪ್ರತಿಕ್ರಿಯೆ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ ಸಚಿವರು, ‘ಪಾಶ್ಚಿಮಾತ್ಯ ರಾಷ್ಟ್ರಗಳು ಹಿಂದಿನಿಂದಲೂ ಬೇರೆ ದೇಶಗಳ ಸಾರ್ವಭೌಮತ್ವ, ಸಾಂವಿಧಾನಿಕ ಅಧಿಕಾರಗಳ ಕುರಿತಾದ ಆಂತರಿಕ ವಿಷಯಗಳ ಮೇಲೆ ತಮ್ಮ ಅಭಿಪ್ರಾಯವೇ ಶ್ರೇಷ್ಠ ಎಂಬ ಮನಸ್ಥಿತಿಯಿಂದ ಹೊರಬಂದಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಬೇರೆ ರಾಷ್ಟ್ರಗಳೂ ಕೂಡ ಪಶ್ಚಿಮದ ದೇಶಗಳ ಕುರಿತಾಗಿ ಸಮನಾದ ದೃಷ್ಟಿಕೋನದಿಂದ ಪ್ರತಿಕ್ರಿಯೆ ನೀಡಲು ಆರಂಭಿಸಿರುವುದು ಸಾಮಾನ್ಯ. ಹಿಂದೆಂದಿಗಿಂತಲೂ ಪ್ರಸ್ತುತ ಸಂದರ್ಭದಲ್ಲಿ ಇಂತಹ ಮನಸ್ಥಿತಿಯನ್ನು ವಿಶ್ವದಾದ್ಯಂತ ನಾವು ಕಾಣಬಹುದು ಎಂದು ಹೇಳಿದರು.
ಇನ್ನೊಂದು ಆಯಾಮದ ಮೂಲಕ ಗಮನಿಸಿದರೆ, ನಮ್ಮಲ್ಲಿಯೇ ಇರುವ ಕೆಲವರು ಪಶ್ಚಿಮದ ರಾಷ್ಟ್ರಗಳಿಗೆ ತೆರಳಿ ಭಾರತದ ಕುರಿತಾಗಿ ಅವಮಾನಕರ ಅಭಿಪ್ರಾಯಗಳನ್ನು ವಿವರಿಸಿ, ಆಹ್ವಾನ ನೀಡಿರುವುದರ ಪರಿಣಾಮದಿಂದ ಮಾತ್ರ ಇಂತಹ ಹೇಳಿಕೆಗಳು ಹೊರಬರಲು ಸಾಧ್ಯ. ಈ ರೀತಿಯ ಮನಸ್ಥಿತಿಯ ದೇಶದ ಒಳಗಿನ ಹಾಗೂ ಹೊರಗಿನ ಇಬ್ಬರಲ್ಲೂ ಇರುವ ಮೂಲ ಸಮಸ್ಯೆಯನ್ನು ಪರಿಹರಿಸುವ ಕಾರ್ಯ ನಡೆಯಲೇಬೇಕಿದೆ ಎಂದು ವಿವರಿಸಿದರು.
ಉಚಿತ ಕೊಡುಗೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, ಇತ್ತೀಚೆಗೆ ಉಚಿತ ಕೊಡುಗೆಗಳನ್ನು ನೀಡುವ ಪರಿಪಾಠ ದೆಹಲಿಯಿಂದ ಶುರುವಾಗಿ ದೇಶದ ಇತರ ಭಾಗಗಳಿಗೂ ಹಬ್ಬುತ್ತಿರುವ ಕ್ರಮ ಆತಂಕಕಾರಿ. ಅಂತಹ ಸರ್ಕಾರಗಳಿಗೆ ಸಂಪನ್ಮೂಲ ಕ್ರೋಢೀಕರಣ ದೊಡ್ಡ ಸಮಸ್ಯೆ ಆಗಿರುವುದರಿಂದ ಹಾಗೂ ತಾತ್ಕಾಲಿಕ ರಾಜಕೀಯ ಲಾಭದ ಸಲುವಾಗಿ ಮಾಡುವ ಇಂತಹ ಯೋಜನೆಗಳಿಗೆ ಯಾರೋ ಒಬ್ಬರು ಬೆಲೆ ತೆರಲೆಬೇಕು. ಒಂದೆಡೆ ಉಚಿತ ನೀಡುವಾಗ, ಇನ್ನೆಲ್ಲೋ ಒಂದೆಡೆಯಿಂದ ಕ್ರೋಢೀಕರಣ ಮಾಡಲೇಬೇಕು. ಜವಾಬ್ದಾರಿ ರಹಿತ ಇಂತಹ ಉಚಿತ ಕೊಡುಗೆಗಳ ಕಾರ್ಯಕ್ರಮಗಳಿಂದ ದೇಶದ ಬೊಕ್ಕಸಕ್ಕೆ ಉಂಟಾಗುವ ಹಾನಿ ಅಪಾರ ಎಂದು ತಿಳಿಸಿದರು.
ಪ್ರಸ್ತುತ ಜಿ 20 ಆತಿಥೇಯ ರಾಷ್ಟ್ರವಾಗಿರುವ ಭಾರತವು, ಇದುವರೆಗೆ ಜಿ 20 ಸದಸ್ಯ ರಾಷ್ಟ್ರವಲ್ಲದ ದೇಶಗಳನ್ನು ಸಂಪರ್ಕಿಸಿ, ಅವುಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಭಾರತದ ಅಭಿವೃದ್ಧಿಗೆ ಪ್ರತೀ ರಾಜ್ಯ, ನಗರ ಗಳು ಕೂಡ ಗಣನೀಯ ಕೊಡುಗೆ ನೀಡುತ್ತಿದ್ದು, ಜಾಗತಿಕ ವಿದ್ಯಮಾನಗಳನ್ನು ಇತರ ನಗರಗಳಿಗೂ ಪ್ರಚುರಪಡಿಸುವ ಉದ್ದೇಶದಿಂದ ಈ ರೀತಿ ಎಲ್ಲೆಡೆ ಜಿ20 ಸಮಾವೇಶಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು .
ಜಿ20 ಸಮಾವೇಶಕ್ಕೆ ಆಗಮಿಸುವ ಜಗತ್ತಿನ200 ಕ್ಕಿಂತಲೂ ಅಧಿಕ ಅಗ್ರಗಣ್ಯ ವ್ಯಕ್ತಿಗಳಿಗೆ ಈ ದೇಶದ ವೈವಿಧ್ಯಮಯ ಸಂಸ್ಕೃತಿ, ಆಚಾರ, ವಿಚಾರ, ಅಡುಗೆ, ತಿನಿಸುಗಳನ್ನು ಕುರಿತಾಗಿ ಅರಿವು ಮೂಡಿಸುವುದು ಇದರ ಹಿಂದಿನ ಉದ್ದೇಶ. ಭಾರತ ವಿಶ್ವಕ್ಕೆ ತೆರೆದುಕೊಳ್ಳುವುದು ಹಾಗೂ ವಿಶ್ವವು ಭಾರತವನ್ನು ಅರ್ಥೈಸಿಕೊಳ್ಳುವುದು ಆಗಿದೆ ಎಂದು ಡಾ. ಎಸ್ ಜೈಶಂಕರ್ ಸಂವಾದದಲ್ಲಿ ವಿವರಿಸಿದರು.