ಮುಂಬೈ, ಸೆ.1: ಮುಂಬೈನಲ್ಲಿ ನಡೆಯುತ್ತಿರುವ ವಿಪಕ್ಷಗಳ ಒಕ್ಕೂಟ ‘ಇಂಡಿಯಾ’ (ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ) ಸಭೆ ಯಶಸ್ವಿಯಾಗಿ ಪೂರ್ಣಗೊಂಡಿದೆ. 13 ಸದಸ್ಯರ ಸಮನ್ವಯ ಸಮಿತಿ ರಚನೆ ಮಾಡುವುದರ ಜೊತೆಗೆ ಮುಂದಿನ ಲೋಕಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಜಂಟಿಯಾಗಿ ಸ್ಪರ್ಧಿಸುವ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿವೆ.
ಮುಂಬೈನಲ್ಲಿ ನಡೆದ ಎರಡು ದಿನಗಳ ಇಂಡಿಯಾ ಒಕ್ಕೂಟದ ಮೂರನೇ ಸಭೆಯಲ್ಲಿ 28 ರಾಜಕೀಯ ಪಕ್ಷಗಳ 60ಕ್ಕೂ ಹೆಚ್ಚಿನ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಇಂಡಿಯಾ ಒಕ್ಕೂಟಕ್ಕೆ ಸಂಬಂಧಿಸಿದಂತೆ ಅತ್ಯುನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಇರುವಂತಹ 13 ಸದಸ್ಯರನ್ನು ಒಳಗೊಂಡ ಸಮನ್ವಯ ಸಮಿತಿಯನ್ನು ರಚಿಸಿದೆ. ಇದನ್ನು ಸದಸ್ಯರನ್ನು ನೇಮಿಸುವ ಮೂಲಕ ಒಕ್ಕೂಟವು ಇದನ್ನು ಅಂಗೀಕರಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಎನ್ಸಿಪಿ ಮುಖಂಡ ಶರದ್ ಪವಾರ್, ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್, ಬಿಹಾರ ಉಪಮುಖ್ಯಮಂತ್ರಿ ಮತ್ತು ಆರ್ಜೆಡಿ ನಾಯಕ ತೇಜಸ್ವಿ ಯಾದವ್, ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ, ಅಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ, ಡಿಎಂಕೆ ನಾಯಕ ಟಿ.ಆರ್. ಬಾಲು, ಸಮಾಜವಾದಿ ಪಕ್ಷದ ನಾಯಕ ಜಾವೇದ್ ಖಾನ್, ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಲಲನ್ ಸಿಂಗ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಸಿಪಿಐ ನಾಯಕ ಡಿ. ರಾಜಾ, ಎನ್ಸಿಪಿಯ ಒಮರ್ ಅಬ್ದುಲ್ಲಾ, ಪಿಡಿಪಿಯ ಮೆಹಬೂಬಾ ಮುಫ್ತಿ ಅವರು ಸಮನ್ವಯ ಸಮಿತಿಯ ಸದಸ್ಯರಾಗಿದ್ದಾರೆ.
ಒಟ್ಟಿಗೆ ಸ್ಪರ್ಧಿಸಲು ನಿರ್ಧಾರ:
ವಿರೋಧ ಪಕ್ಷದ ಮೂರನೇ ಸುತ್ತಿನ ಸಭೆಯಲ್ಲಿಯೂ ಸಹ ಔಪಚಾರಿಕ ಮಾತುಕತೆಯ ಸಂದರ್ಭದಲ್ಲಿ, ಇಂಡಿಯಾ ಬಣದ ನಾಯಕರು ಜಂಟಿ ಹೇಳಿಕೆ ನೀಡಿದ್ದು, ‘ಇಂಡಿಯಾ ಒಕ್ಕೂಟದ ಪಕ್ಷಗಳು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಾಧ್ಯವಾದಷ್ಟು ಒಟ್ಟಿಗೆ ಸ್ಪರ್ಧಿಸಲು ನಿರ್ಧರಿಸಿದ್ದೇವೆ’ ಎಂದು ಘೋಷಿಸಿದ್ದಾರೆ. ರಾಜ್ಯವಾರು ಸೀಟು ಹಂಚಿಕೆ ಸಂಬಂಧ ಸಮನ್ವಯ ಸಮಿತಿ ಈ ತಿಂಗಳ ಅಂತ್ಯದೊಳಗೆ ಸಭೆ ಸೇರಿ ಚರ್ಚಿಸಲಿದೆ ಎಂದು ಹೇಳಲಾಗಿದೆ.
ಒಂದು ರಾಷ್ಟ್ರ ಒಂದು ಚುನಾವಣೆಗೆ ವಿರೋಧ
ಕೇಂದ್ರ ಬಿಜೆಪಿ ಸರ್ಕಾರ ಜಾರಿ ಮಾಡಲು ಉದ್ದೇಶಿಸಿದೆ ಎನ್ನಲಾದ ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆಗೆ ಇಂಡಿಯಾ ಒಕ್ಕೂಟ ಒಮ್ಮತದಿಂದ ವಿರೋಧಿಸಿದೆ. ಒಂದು ರಾಷ್ಟ್ರ, ಒಂದು ಚುನಾವಣೆಯ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಸಮಿತಿಯನ್ನು ರಚಿಸುವ ಸರ್ಕಾರದ ಕ್ರಮವನ್ನು ವಿರೋಧ ಪಕ್ಷದ ನಾಯಕರು ಟೀಕಿಸಿದರು, ಇದು ದೇಶದ ಒಕ್ಕೂಟ ರಚನೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಆರೋಪಿಸಿದ್ದಾರೆ.
ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್, ದೇಶವು ಈಗಾಗಲೇ ಒಂದಾಗಿದೆ ಮತ್ತು ಯಾರೂ ಅದನ್ನು ಪ್ರಶ್ನಿಸುತ್ತಿಲ್ಲ. ನಾವು ನ್ಯಾಯಸಮ್ಮತ ಚುನಾವಣೆಯನ್ನು ಬಯಸುತ್ತೇವೆ. ‘ಒಂದು ರಾಷ್ಟ್ರ ಒಂದು ಚುನಾವಣೆ’ ಅಲ್ಲ. ನ್ಯಾಯಸಮ್ಮತ ಚುನಾವಣೆಯ ನಮ್ಮ ಬೇಡಿಕೆಯಿಂದ ಗಮನವನ್ನು ಬೇರೆಡೆ ಸೆಳೆಯಲು ಈ ಮಸೂದೆ ಪ್ರಸ್ತಾಪಿಸಲು ಮುಂದಾಗಿದೆ ಎಂದು ಆರೋಪಿಸಿದರು.
ಸಿಪಿಐ ಮುಖಂಡ ಡಿ ರಾಜಾ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಪ್ರಜಾಪ್ರಭುತ್ವದ ತಾಯಿ ಎಂದು ಯಾವಾಗಲೂ ಮಾತನಾಡುತ್ತಾರೆ ಮತ್ತು ಇತರ ರಾಜಕೀಯ ಪಕ್ಷಗಳೊಂದಿಗೆ ಚರ್ಚಿಸದೆ ಸರ್ಕಾರ ಏಕಪಕ್ಷೀಯ ನಿರ್ಧಾರವನ್ನು ಹೇಗೆ ತೆಗೆದುಕೊಳ್ಳುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.
ಇಂಡಿಯಾ ಒಕ್ಕೂಟದ ಲಾಂಛನ ಅನಾವರಣ ಮಾಡಲಾಗುವ ನಿರ್ಧಾರವನ್ನು ಸದ್ಯಕ್ಕೆ ಮುಂದೂಡಲಾಗಿದೆ.
ಮೈತ್ರಿಯಲ್ಲಿ ಲಾಂಛನ ಬಹಳ ಮುಖ್ಯವಾದ ಭಾಗ. ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು. ಇಂದು ಯಾವುದೇ ಲೋಗೋ ಬಿಡುಗಡೆ ಮಾಡಿಲ್ಲ ಎಂದು ಸಂಜಯ್ ರಾವುತ್ ಹೇಳಿದರು.
ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ
ಚಂದ್ರಯಾನ ಯಶಸ್ವಿಯಾಗಿ ಕೈಗೊಂಡಿರುವ ಇಸ್ರೋ ವಿಜ್ಞಾನಿಗಳಿಗೆ ಅಭಿನಂದಿಸುವಂತಹ ಅಭಿನಂದನಾ ನಿರ್ಣಯವನ್ನು ‘ಇಂಡಿಯಾ’ ಒಕ್ಕೂಟದ ಸಭೆಯಲ್ಲಿ ಅಂಗೀಕರಿಸಲಾಯಿತು.
ಇಸ್ರೋದ ಯಶಸ್ವಿ ಚಂದ್ರಯಾನ-3 ಮಿಷನ್ ಕುರಿತು ಪ್ರತಿಕ್ರಿಯೆ ನೀಡಿದ ಒಕ್ಕೂಟದ ಸಭೆ, ‘ನಾವು, ಇಂಡಿಯಾ ಒಕ್ಕೂಟದ ಪಕ್ಷಗಳು ಇಡೀ ಇಸ್ರೋದ ಹಿಂದಿನ ಮತ್ತು ಈಗಿನ ವಿಜ್ಞಾನಿಗಳನ್ನು ನಮ್ಮ ದೇಶವನ್ನು ಹೆಮ್ಮೆಪಡಿಸಿದ ಅತ್ಯುತ್ತಮ ಸಾಧನೆಗಳಿಗಾಗಿ ಅಭಿನಂದಿಸುತ್ತೇವೆ. ಚಂದ್ರಯಾನ-3 ಜಗತ್ತನ್ನು ರೋಮಾಂಚನಗೊಳಿಸಿದೆ. ನಾಳೆ ಆದಿತ್ಯ-ಎಲ್1 ಉಡಾವಣೆಗಾಗಿ ಉತ್ಸುಕತೆಯಿಂದ ನೋಡುತ್ತಿದೆ. ಇಸ್ರೋದ ಅಸಾಧಾರಣ ಸಾಧನೆಗಳು ನಮ್ಮ ಸಮಾಜದಲ್ಲಿ ವೈಜ್ಞಾನಿಕ ಮನೋಭಾವವನ್ನು ಬಲಪಡಿಸುತ್ತದೆ ಮತ್ತು ನಮ್ಮ ಯುವಕರಿಗೆ ವೈಜ್ಞಾನಿಕ ಪ್ರಯತ್ನದ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಲು ಸ್ಫೂರ್ತಿ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ’ ಎಂದು ನಿರ್ಣಯ ಕೈಗೊಂಡಿದ್ದು,ಸರ್ವಾನುಮತದಿಂದ ಅಂಗೀಕರಿಸಲಾಗಿದೆ.