ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.22: ರಾಜ್ಯದಲ್ಲಿ ಸಾಹಿತಿಗಳಿಗೆ ರಕ್ಷಣೆ ನೀಡಲು ಮತ್ತು ಅವರಿಗೆ ಬೆದರಿಕೆ ಒಡ್ಡುವ ದುಷ್ಕರ್ಮಿಗಳ ಪತ್ತೆಗೆ ತಂಡ ರಚನೆ ಮಾಡುವುದಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.
ಇಂದು ವಿಧಾನಸೌಧದಲ್ಲಿ ಸಾಹಿತಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಸಾಹಿತಿಗಳಿಗೆ ಈಗಾಗಲೇ ಭದ್ರತೆ ಒದಗಿಸಲಾಗಿದೆ. ಆದರೆ, ಸಾಹಿತಿಗಳ ಕೋರಿಕೆಯಂತೆ ಬೆದರಿಕೆಯ ಹಿಂದೆ ಕೆಲ ದುಷ್ಟ ಶಕ್ತಿಗಳು ಕೆಲಸ ಮಾಡುತ್ತಿವೆ. ಅಂತಹವರನ್ನು ಪತ್ತೆ ಮಾಡಲು ಸಾಹಿತಿಗಳು ಕೋರಿದ್ದು, ಅದರಂತೆ ತಂಡ ರಚನೆ ಮಾಡಲಾಗುವುದು ಮತ್ತು ಅವರಿಗೆ ಹೆಚ್ಚಿನ ಭದ್ರತೆಯನ್ನು ಸಹ ಒದಗಿಸುವುದಾಗಿ ಹೇಳಿದರು.
ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಸಾಹಿತಿ ಡಾ.ಕೆ. ಮರುಳಸಿದ್ದಪ್ಪ ಅವರು, ಈ ಹಿಂದೆ ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರಿಗೂ ಸಹ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಆದರೂ ಅವರನ್ನು ಜೀವಂತವಾಗಿ ಉಳಿಸಿಕೊಳ್ಳಲು ಆಗಲಿಲ್ಲ. ಕೇವಲ ಪೊಲೀಸ್ ಭದ್ರತೆ ಒದಗಿಸುವುದರಿಂದ ರಕ್ಷಣೆ ಸಾಧ್ಯವಿಲ್ಲ. ಸಾಹಿತಿಗಳಿಗೆ ಬೆದರಿಕೆ ಒಡ್ಡಲು ಗುಂಪೇ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದು ಅದನ್ನು ಪತ್ತೆಹಚ್ಚಬೇಕು ಎಂದು ಒತ್ತಾಯಿಸಿದರು.
ಬಂಜಗೆರೆ ಜಯಪ್ರಕಾಶ್ ಮತ್ತು ಕೆಲ ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದ ಒಕ್ಕಣಿಕೆ ಒಬ್ಬರೇ ಬರೆದಿದ್ದರಿಂದ ಇದು ಕೇವಲ ಒಬ್ಬ ವ್ಯಕ್ತಿಯ ಕೆಲಸ ಅಲ್ಲ. ಸಾಹಿತಿಗಳ ಧ್ವನಿ ಅಡಗಿಸಲು ಒಂದು ಗುಂಪು ಕೆಲಸ ಮಾಡುತ್ತಿದೆ ಎಂದು ನಮಗೆ ಅನ್ನಿಸುತ್ತಿದೆ. ಕಾರಣ ನಮಗೆ ಭದ್ರತೆ ನೀಡುವುದಕ್ಕಿಂತ ದುಷ್ಕರ್ಮಿಗಳ ಗುಂಪು ಪತ್ತೆಹಚ್ಚಿ ಕ್ರಮ ಕೈಗೊಳ್ಳಿ ಎಂದರು.
ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ಸಾಹಿತಿಗಳಾದ ಜಿ. ರಾಮಕೃಷ್ಣ, ಡಾ.ಎಸ್.ಜಿ. ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ವಸುಂಧರಾ ಭೂಪತಿ ಮತ್ತಿತರರು ಇದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮರುಳಸಿದ್ದಪ್ಪ ಅವರು, ಬಿಜೆಪಿ ವಿರುದ್ಧ ಮಾತನಾಡುವ ಸಾಹಿತಿಗಳಿಗೆ ರಕ್ಷಣೆ ನೀಡಬೇಕು ಎಂದು ಹೇಳಿದ ಅವರು ಈ ಬೆದರಿಕೆ ಹಿಂದೆ ಇರುವ ಷ್ಯಡ್ಯಂತ ಬಯಲಾಗಲಿ ಎಂದರು.