ಸುದ್ದಿಮೂಲ ವಾರ್ತೆ
ಬೆಂಗಳೂರು,ಮೇ 25: ಸಮರ್ಥ ಅಭ್ಯರ್ಥಿಗಳನ್ನು ತಯಾರು ಮಾಡುವಲ್ಲಿ, ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವಲ್ಲಿ ಲೋಪ ಎಸಗಿರುವ ಪಕ್ಷದ ಜಿಲ್ಲಾ ಅಧ್ಯಕ್ಷರುಗಳನ್ನು ಮಾಜಿ ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಂಡರು.
ಅಧ್ಯಕ್ಷಗಿರಿ ಎಂದರೆ ಸ್ವಂತ ಜಹಗೀರು ಅಲ್ಲ, ಸಂಘಟನೆಯನ್ನು ಸರಿಯಾಗಿ ಮಾಡಿಲ್ಲ, ಯಾರೂ ಸಮರ್ಥವಾಗಿ ಕೆಲಸ ಮಾಡಿಲ್ಲ, ಎಲ್ಲಾ ಹಂತಗಳಲ್ಲಿಯೂ ಸಂಘಟನೆ ಸೋತಿದೆ, ನಾನೇ ಅಭ್ಯರ್ಥಿ ಹುಡುಕಿ ಕೊಡಬೇಕಾದ ಪರಿಸ್ಥಿತಿ ಬಂದಿದೆ, ಹಾಗಾದರೆ ಜಿಲ್ಲಾಧ್ಯಕ್ಷರು ಮಾಡಿದ್ದೇನು? ಇವರೇನು ಅಲಂಕಾರಕ್ಕೆ ಇದ್ದಾರಾ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಆರ್ಥಿಕವಾಗಿ ನಾನೆಷ್ಟು ಕಷ್ಟಪಟ್ಟೆ ಎನ್ನುವುದು ನನಗಷ್ಟೇ ಗೊತ್ತು, ಯಾರೂ ನನ್ನ ನೋವು ಹಂಚಿಕೊಳ್ಳಲು ಮುಂದೆ ಬರಲಿಲ್ಲ. ಹಿಂದೆ ಯಾರನ್ನಾದರೂ ಹಾಳು ಮಾಡಬೇಕಾದರೆ ಹಳೆಯ ಲಾರಿ ಕೊಡಿಸು ಎನ್ನುವ ಮಾತಿತ್ತು. ಈಗ ಯಾರ ಮನೆಯನ್ನಾದರೂ ಹಾಳು ಮಾಡಬೇಕಾದರೆ ಅವರನ್ನು ರಾಜಕೀಯಕ್ಕೆ ಕರೆದುಕೊಂಡು ಬಂದು ಅಭ್ಯರ್ಥಿ ಮಾಡು ಎನ್ನುವಂತೆ ಆಗಿದೆ. ಈ ಚುನಾವಣೆಯಲ್ಲಿ ಕಂಡಂಥ ಕಟುಸತ್ಯ ಇದು.
ನಿಮ್ಮನ್ನು ಮತೆ ಅಭ್ಯರ್ಥಿಗಳಾಗಿ ಎಂದು ಹೇಳುವ ಧೈರ್ಯ ನನ್ನಲ್ಲಿ ಉಳಿದಿಲ್ಲ ಎಂದು ಕುಮಾರಸ್ವಾಮಿ ಅವರು ಅಭ್ಯರ್ಥಿಗಳನ್ನು ಉದ್ದೇಶಿಸಿ ಹೇಳಿದರು.
ಗ್ಯಾರಂಟಿಗಳ ಬಗ್ಗೆ ದನಿ ಎತ್ತಿ:
ನಾವು ಹಣದಿಂದ ಚುನಾವಣೆ ನಡೆಸಲು ಸಾಧ್ಯವಿಲ್ಲ. ರಾಜಕೀಯ ಮಾಡಲಾಗದು. ಜನರ ಮನಸ್ಸು ಗೆದ್ದು ರಾಜಕಾರಣ ಮಾಡಬೇಕು. ಈಗ ಐದು ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಸರಕಾರ ಈಗ ಷರತ್ತು ಅನ್ವಯ ಅನ್ನುತ್ತಿದೆ. ನಂಗೂ ಫ್ರೀ ನಿಂಗೂ ಫ್ರೀ ಎಂದವರು ಈಗ ಕಂಡಿಷನ್ಸ್ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಹೇಳಿದ್ದೇನು, ಡಿಕೆಶಿ ಹೇಳಿದ್ದೇನು? ಖರ್ಗೆ ಹೇಳಿದ್ದೇನು? ಇದನ್ನೇ ನಾವು ಜನರ ಮುಂದೆ ಇಡಬೇಕು. ಈ ಬಗ್ಗೆಯೇ ಆಂದೋಲನವನ್ನೇ ಮಾಡಬೇಕು. ಜನರ ಜತೆ ನಿಲ್ಲಬೇಕು. ಜನರನ್ನೇ ಆಂದೋಲನಕ್ಕೆ ಧುಮುಕುವಂತೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಅವರು ಕರೆ ನೀಡಿದರು.
ಕೆಲ ಅಭ್ಯರ್ಥಿಗಳಿಗೆ ಚಾಟಿ:
ಬೆಂಗಳೂರು ನಗರದಲ್ಲಿ ಪಕ್ಷ ಸಂಘಟನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು, ಕಳೆದ ಹಲವು ವರ್ಷಗಳಿಂದ ರಾಜಧಾನಿಯಲ್ಲಿ ಪಕ್ಷದ ಸಂಘಟನೆ ನೆನೆಗುದಿಗೆ ಬಿದ್ದಿದೆ. ಚುನಾವಣೆ ಹತ್ತಿರಕ್ಕೆ ಬಂದಾಗ ಬಂದು ಗೋಳಾಡಿ ಬೀ ಫಾರಂ ತೆಗೆದುಕೊಂಡು ಹೋಗುತ್ತೀರಿ, ಆಮೇಲೆ ಯಾವನೋ ಜತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳುತ್ತೀರಿ ಎಂದು ಖಾರವಾಗಿ ಕೆಲವರ ಮೇಲೆ ಚಾಟಿ ಬೀಸಿದರು.
ಇನ್ನು ಮುಂದೆ ಬೆಂಗಳೂರಿನಲ್ಲಿ ಸಂಘಟನೆ ಬಗ್ಗೆ ನಿರ್ಲಕ್ಷ್ಯ ಮಾಡುವುದಿಲ್ಲ. ನಗರದ ನಾಲ್ಕು ವಿಭಾಗಕ್ಕೆ ನಾಲ್ವರು ಅಧ್ಯಕ್ಷರನ್ನು ಮಾಡಿ ಆದೇಶ ಹೊರಡಿಸಿ ವೇದಿಕೆಯ ಮೇಲೆ ಕೂತಿದ್ದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರಿಗೆ ಸೂಚನೆ ನೀಡಿದ ಮಾಜಿ ಮುಖ್ಯಮಂತ್ರಿಗಳು,
ಒಬ್ಬರಿಗೆ ಕೊಟ್ಟರೆ ಅವರು ಏಕ ಚಕ್ರಾಧಿಪತ್ಯ ಮಾಡಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.
ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಸೇರಿದಂತೆ ಎಲ್ಲ ನೂತನ ಶಾಸಕರು, ಮಾಜಿ ಶಾಸಕರು, ಸೋತ ಅಭ್ಯರ್ಥಿಗಳು, ಜಿಲ್ಲಾ ಅಧ್ಯಕ್ಷರು ಸಭೆಯಲ್ಲಿ ಹಾಜರಿದ್ದರು.