ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ, ಮೇ 18: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜನರ ವಿಶ್ವಾಸವನ್ನು ಉಳಿಸಿಕೊಂಡು ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನಾನು ಕಾಂಗ್ರೆಸ್ ಪಕ್ಷದಲ್ಲಿ ಸೇರ್ಪಡೆಯಾಗಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಅದು ಕೇವಲ ವದಂತಿ. ಯಾರು ಸಹ ಕಿವಿಗೂಡಬಾರದೆಂದು ಮಾಜಿ ಶಾಸಕ ಕೆಪಿ ಬಚ್ಚೇಗೌಡ ಮನವಿ ಮಾಡಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾಗತನಾಡಿದ ಅವರು, ಆತ್ಮಸಾಕ್ಷಿಗೆ ಅನುಗುಣವಾಗಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದೇನೆ. ಜನ ಪ್ರೀತಿಯಿಂದ ಮತಗಳು ಸಹ ನೀಡಿದ್ದಾರೆ. ಹೀಗಿರುವಾಗ ಬೇರೆ ಪಕ್ಷಕ್ಕೆ ಬೆಂಬಲಿಸುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದರು.
ಮಾಜಿ ಶಾಸಕರು ಈ ಬಾರಿಯ ಚುನಾವಣೆಯಲ್ಲಿ ಬೇರೆ ಪಕ್ಷಗಳಿಗೆ ಮತ ಹಾಕಿ ಎಂದು ಹೇಳಿದ್ದಾರೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನು ಸಾಬೀತುಪಡಿಸಿದರೆ ನಾನು ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದು ಸವಾಲು ಹಾಕಿದರು.
ಕರ್ನಾಟಕದ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆ ಹಾಗೂ ಡಾ.ಕೆ.ಸುಧಾಕರ್ ಅವರು ಸ್ವಯಂಕೃತ ಅಪರಾಧದಿಂದ ಸೋಲು ಅನುಭವಿಸಿದ್ದಾರೆ. ಚುನಾವಣೆಯಲ್ಲಿ ಅವರ ವಿರುದ್ದ ಷಡ್ಯಂತ್ರ ನಡೆಸಲಾಗಿದೆ ಎಂಬುದು ನಿರಾಧಾರ. ಹಾಗಾದರೆ ಅವರ ಸ್ವಗ್ರಾಮ ಪೆರೇಸಂದ್ರದಲ್ಲಿ ಮತ ಕಡಿಮೆ ಬರಲು ಕಾರಣ ಏನು ಎಂಬುದನ್ನು ಅವರು ಸ್ಪಷ್ಟಪಡಿಸಲಿ ಎಂದು ಆಗ್ರಹಸಿದರು.
ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಹಣದ ಹೊಳೆ ಯಾವ ರೀತಿ ಹರಿಸಿದ್ದೀರಿ ಎಂದು ಕ್ಷೇತ್ರದ ಜನರಿಗೆ ಗೊತ್ತಿದೆ. ಕರ್ನಾಟಕದ ಜನ ಅವರ ಸೋಲಿನಿಂದ ಸಂಭ್ರಮಿಸಿದ್ದಾರೆ ಎಂದ ಮಾಜಿ ಶಾಸಕರು ಡಾ.ಕೆ.ಸುಧಾಕರ್ ಅವರ ನಡುವಳಿಕೆ, ಅವರ ಪಕ್ಷದ ಸಿದ್ದಾಂತ ಮತ್ತು ಆಡಳಿತ ವೈಫಲ್ಯದಿಂದ, ಸಾರ್ವಜನಿಕರು ಮತ್ತು ಕಾರ್ಯಕರ್ತರೊಂದಿಗೆ ಅವರು ನಡೆದುಕೊಳ್ಳುತ್ತಿದ್ದ ರೀತಿ ನೀತಿಗಳಿಂದ ಅವರನ್ನು ಸೋಲಿಸಿ ಪಾಠಕಲಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಡಾ.ಕೆ.ಸುಧಾಕರ್ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಸೋಲಾಗಿದೆ ಮತದಾರರ ತೀರ್ಪಿಗೆ ಲೆಬಾಗಿ ಜನರ ಪ್ರೀತಿ ವಿಶ್ವಾಸ ಗಳಿಸುವ ಬದಲಿಗೆ ತಮ್ಮ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಅಪಪ್ರಚಾರ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಯಾರು ಸಹ ಅದಕ್ಕೆ ಕಿವಿಗೂಡಬಾರದು. ನಾನು ಪ್ರಸ್ತುತ ಜೆಡಿಎಸ್ ಪಕ್ಷದಲ್ಲಿಯೇ ಇದ್ದೇನೆ. ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಕುರಿತು ಅತಿ ಶೀಘ್ರದಲ್ಲಿ ಆತ್ಮಾವಲೋಕನ ಸಭೆಯನ್ನು ಕರೆದು ಸರಿಪಡಿಸಿಕೊಳ್ಳುವ ಕೆಲಸವನ್ನು ಮಾಡುತ್ತೇನೆ ಎಂದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಮುನೇಗೌಡ, ಜಿಪಂ ಮಾಜಿ ಸದಸ್ಯ ಕೆ.ಸಿ. ರಾಜಾಕಾಂತ್, ಜಿಲ್ಲಾ ಜೆಡಿಎಸ್ ಒಬಿಸಿ ಘಟಕದ ಅಧ್ಯಕ್ಷ ವೆಂಕಟೇಶ್ ನಗರಸಭೆಯ ಉಪಾಧ್ಯಕ್ಷೆ ವೀಣಾ ರಾಮು, ಮುಖಂಡರಾದ ಮುಷ್ಟೂರು ಶಿವು, ಅಣ್ಯಮ್ಮ, ರೈತ ಮುಖಂಡರಾದ ಯಲುವಹಳ್ಳಿ ಸೊಣ್ಣೇಗೌಡ, ಶಾಂತಮರ್ತಿ, ಮೆಹಬೂಬ್ ಸಾಬ್, ಅಂಗರೇಕನಹಳ್ಳಿ ರವಿಕುಮಾರ್, ಸುಬ್ಬರಾಯಪ್ಪ, ಚಂದ್ರಣ್ಣ, ಅಂಬರೀಶ್, ವೆಂಕಟೇಶ್, ರ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.