ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.9: ಕರ್ನಾಟಕದಲ್ಲಿ ಮುಂದಿನ ಮುಖ್ಯಮಂತ್ರಿ ಮಲ್ಲಿಕಾರ್ಜುನ ಖರ್ಗೆ ಆಗಬಹುದೇ ಎಂಬ ವಿಚಾರ ಚುನಾವಣೆ ನಂತರದ ವಿಷಯ. ಈಗ ಅಪ್ರಸ್ತುತ ಎಂದು ಮಾಜಿ ಕೇಂದ್ರ ಸಚಿವ, ಸಂಸದ ಶಶಿ ತರೂರ್ ಹೇಳಿದರು.
ಖರ್ಗೆ ಅವರು ನನ್ನ ಗೌರವಯುತ ಅಧ್ಯಕ್ಷರು. ನಾವೆಲ್ಲರೂ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಘೋಷಣೆ ಮಾಡುವ ಸಂಪ್ರದಾಯವಿಲ್ಲ. ಇದು ಆರೋಗ್ಯಕರ ಪ್ರಕ್ರಿಯೆಯಾಗಿದ್ದು, ಮೊದಲು ಚುನಾವಣೆ ಗೆಲ್ಲಬೇಕು, ನಂತರ ಈ ವಿಚಾರವಾಗಿ ಚರ್ಚೆ ಮಾಡಬಹುದು ಎಂದು ಅವರು ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯದಲ್ಲಿ ಚುನಾವಣೆ ಕಾವು ಹೆಚ್ಚಾಗಿದ್ದು, ಕಾಂಗ್ರೆಸ್ ಪಕ್ಷದ ಆಚಾರ ವಿಚಾರಗಳ ಪ್ರಚಾರ ಮಾಡಲಾಗುತ್ತಿದೆ. ನಾನು ಮೊದಲ ಬಾರಿ ಮತ ಹಾಕುತ್ತಿರು ಯುವ ಮತದಾರರು ಹಾಗೂ ಶಿಕ್ಷಕರ ಜತೆ ಚರ್ಚೆ ಮಾಡಿದ್ದು, ಸಾಕಷ್ಟು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ನಮ್ಮ ಸಂದೇಶ ಬಹಳ ಸರಳವಾಗಿದೆ. ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ದುರಾಡಳಿತವಿದೆ. ಪರಿಣಾಮ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ಕಾಂಗ್ರೆಸ್ ಪಕ್ಷ ಈ ಸಮಸ್ಯೆಗಳಿಗೆ ಪರಿಹಾರ ನೀಡಲು ಕೆಲವು ಕಾರ್ಯಕ್ರಮ ರೂಪಿಸಿದೆ. ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ, ಮನೆಯೊಡತಿಗೆ ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಲಾಗಿದೆ.
ವಿಶ್ವ ವಿಖ್ಯಾತಿ ಪಡೆದಿದ್ದ ಬೆಂಗಳೂರು ವಾಸ ಯೋಗ್ಯ ನಗರಗಳ ಪಟ್ಟಿಯಲ್ಲಿ ಕುಸಿತ ಕಂಡಿದೆ. ಸಂಚಾರ ದಟ್ಟಣೆ ಹೆಚ್ಚಾಗಿದೆ. ಹೀಗೆ ಅನೇಕ ಸಮಸ್ಯೆಗಳು ರಾಜ್ಯ ಹಾಗೂ ಬೆಂಗಳೂರು ನಗರವನ್ನು ಕಾಡುತ್ತಿವೆ. ಸರ್ಕಾರದ ಆಡಳಿತದಲ್ಲಿ ಬದ್ಧತೆ ಇಲ್ಲವಾಗಿದ್ದು, ದಕ್ಷ ಆಡಳಿತ ನೀಡಲು ಕಾಂಗ್ರೆಸ್ ಸರ್ಕಾರ ಸಮರ್ಥವಾಗಿದೆ. ಇನ್ನು ಜನರು 40% ಕಮಿಷನ್ ಸರ್ಕಾರಿದಿಂದ ಬೇಸತ್ತಿದ್ದು, ಕಾಂಗ್ರೆಸ್ ಸರ್ಕಾರ ಜನರ ಹಿತ ಕಾಯಲು 100% ಬದ್ಧತೆ ನೀಡಲಿದೆ ಎಂದು ತರೂರ್ ವಿವರಿಸಿದರು.
ಕರ್ನಾಟಕದಲ್ಲಿ ಕಳೆದ ಕೆಲವು ತಿಂಗಳಲ್ಲಿ 5 ಶಾಸಕರು, 2 ಎಂಎಲ್ ಸಿ, 11 ಮಾಜಿ ಶಾಸಕರು, 4 ಮಾಜಿ ಎಂಎಲ್ ಸಿ, 1 ಮಾಜಿ ಸಂಸದರು ಕಾಂಗ್ರೆಸ್ ಪಕ್ಷ ಸೇರಿದ್ದು, ಬೇರೆ ಪಕ್ಷದ ನಾಯಕರು ಕೂಡ ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ಗೆಲವು ಸಾಧಿಸಲಿದೆ ಎಂದು ನಂಬಿರುವುದಕ್ಕೆ ಸಾಕ್ಷಿ. ರಾಜಕೀಯ ನಾಯಕರು ತಮ್ಮ ಸಿದ್ದಾಂತಕ್ಕೆ ವಿರೋಧವಾಗಿ ಪಕ್ಷಾಂತರ ಮಾಡುವುದು ಬೇಸರದ ವಿಚಾರ. ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಪಕ್ಷ ಸೇರ್ಪಡೆಯಾದರೆ ಉತ್ತಮ. ರಾಜಕೀಯ ಎಂದರೆ ಸಿದ್ಧಾಂತ, ಮೌಲ್ಯ, ತತ್ವಗಳ ಆಧಾರದ ಮೇಲೆ ನಿಂತಿವೆ’ ಎಂದು ತಿಳಿಸಿದರು.
ರಾಜ್ಯದಲ್ಲಿ ಜನರು ಕಾಂಗ್ರೆಸ್ ಪಕ್ಷದ ಕಡೆ ಒಲವು ತೋರುತ್ತಿದ್ದಾರೆ. ನಾನು ಇಲ್ಲಿ 2 ದಿನಗಳ ಕಾಲ ಪ್ರಚಾರ ಮಾಡುತ್ತಿದ್ದು, ನಿನ್ನೆ ಯುವ ಮತದಾರರ ಜತೆ ಮಾತುಕತೆ ನಡೆಸಿದ್ದು, ಇಂದು ಶಿಕ್ಷಕರ ಜತೆ ಚರ್ಚೆ ಮಾಡಿದ್ದೇನೆ. ಜನರು ಕಳೆದ ನಾಲ್ಕು ವರ್ಷಗಳ ದುರಾಡಳಿತದಿಂದ ಬೇಸರವಾಗಿ ಕಾಂಗ್ರೆಸ್ ಸರ್ಕಾರವನ್ನು ಬಯಸುತ್ತಿದ್ದಾರೆ. ಬೆಂಗಳೂರು ಅತಿ ಹೆಚ್ಚು ವಿದೇಶಿ ಬಂಡವಾಳವನ್ನು ಆಕರ್ಷಿಸುತ್ತಿತ್ತು. ಆದರೆ ಈಗ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಬಂಡವಾಳ ಹೂಡಿಕೆ ಬೇರೆ ರಾಜ್ಯಗಳ ಪಾಲಾಗುತ್ತಿವೆ. ಇದು ದುರಾಡಳಿತಕ್ಕೆ ಸಾಕ್ಷಿ. ರಾಜ್ಯದಲ್ಲಿ ಬದಲಾವಣೆ ಅಗತ್ಯವಾಗಿದ್ದು, ಈ ಬಾರಿ ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ. ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಬಿಜೆಪಿಯ ಕೆಟ್ಟ ಆಪರೇಷನ್ ಕಮಲ ಸಂಪ್ರದಾಯಕ್ಕೆ ಅವಕಾಶ ನೀಡಬಾರದು ಎಂದರು.