ಸುದ್ದಿಮೂಲ ವಾರ್ತೆ
ಮೈಸೂರು,ಜೂ.22 : ಚಾಮುಂಡಿ ಬೆಟ್ಟಕ್ಕೆ ಆಷಾಢ ಶುಕ್ರವಾರಗಳಂದು ಖಾಸಗಿ ವಾಹನಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದ್ದು, ಸರ್ಕಾರಿ ಬಸ್ ಗಳಲ್ಲಿ ಶುಕ್ರವಾರ ಮಾತ್ರ ಮಹಿಳೆಯರ ಜೊತೆಗೆ ಪುರುಷ ಭಕ್ತಾದಿಗಳಿಗೆ ಉಚಿತ ಪ್ರಯಾಣಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದೆ.
ಇದೇ ವೇಳೆ ಖಾಸಗಿ ವಾಹನಗಳ ದಟ್ಟಣೆ, ಅಪಘಾತ ತಡೆ, ಸುಗಮ ಸಂಚಾರಕ್ಕಾಗಿ ಆಷಾಢ ಮಾಸದ ವಿಶೇಷ ದಿನಗಳಲ್ಲಿ ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಜೂನ್ 23 ರಿಂದ ಜುಲೈ 14ರ ಆಷಾಢ ಶುಕ್ರವಾರ ದಿನಗಳಂದು ಹಾಗೂ ಜುಲೈ 10 ವರ್ಧಂತಿ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಕಾರಣ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ.ಬೆಟ್ಟಕ್ಕೆ ಬರುವ ಭಕ್ತಾದಿಗಳು ತಮ್ಮ ವಾಹನಗಳನ್ನು ಲಲಿತಮಹಲ್ ಮೈದಾನದಲ್ಲಿ ನಿಲುಗಡೆ ಮಾಡಬೇಕು.
ಬೆಟ್ಟದ ತಪ್ಪಲಿನಲ್ಲಿ ತಮ್ಮ ವಾಹನಗಳ ನಿಲ್ಲಿಸಿ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸಬೇಕು.
ಬೆಳಗಿನ ಜಾವ 3 ರಿಂದ ರಾತ್ರಿ 10 ಗಂಟೆವರೆಗೂ ಬಸ್ ಸೌಲಭ್ಯ ಚಾಮುಂಡಿ ಬೆಟ್ಟಕ್ಕೆ ಸರ್ಕಾರಿ ಬಸ್ ಗಳಲ್ಲಿ ಎಲ್ಲರಿಗೂ ಉಚಿತ ಬಸ್ ಸೌಲಭ್ಯ ಇರುತ್ತದೆ. ಶಿಷ್ಟಾಚಾರವಿರುವ ಗಣ್ಯರ ಮತ್ತು ಅತೀ ಗಣ್ಯರ ವಾಹನಗಳ ಹೊರತುಪಡಿಸಿ ಉಳಿದ ಎಲ್ಲಾ ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಎಂದು ಮೈಸೂರು ನಗರ ಪೋಲಿಸ್ ಆಯುಕ್ತ ಬಿ. ರಮೇಶ್ ಬಾನೋತ್ ತಿಳಿಸಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಪೊಲೀಸ್ ಆಯುಕ್ತ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿ, ಆಷಾಢ ಶುಕ್ರವಾರ ಹಾಗೂ ವರ್ಧಂತಿ ಉತ್ಸವದ ಸಿದ್ದತೆಗಳ ಬಗ್ಗೆ ಪರಿಶೀಲನೆ ನಡೆಸಿದರು.