ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ.18: ರಾಜ್ಯದಲ್ಲಿ ಮಹಿಳೆಯರಿಗೆ ಸಾರಿಗೆ ಬಸ್ ಉಚಿತ ಎಂದು ಘೋಷಿಸಿರುವ ಹಿನ್ನೆಲೆ ರಾಜ್ಯದ ಎಲ್ಲಾ ಧಾರ್ಮಿಕ ಕೇಂದ್ರಗಳು ಹಾಗೂ ದರ್ಗಾಗಳಲ್ಲಿ ಭಕ್ತ ಸಾಗರವೇ ಹರಿದುಬಂದಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಚಾಮುಂಡಿ ಬೆಟ್ಟ, ಹೊರನಾಡು, ಮಲೆ ಮಹದೇಶ್ವರ ಬೆಟ್ಟ, ಶ್ರೀರಂಗಪಟ್ಟಣ, ನಿಮಿಷಾಂಬ, ಶೃಂಗೇರಿ, ಕಟೀಲು, ಹುಬ್ಬಳ್ಳಿಯ ಗವಿಮಠ, ಚಿಕ್ಕಮಗಳೂರು, ಕೆಆರ್ಎಸ್ ಸೇರಿದಂತೆ ಹಲವೆಡೆ ಜನವೋ ಜನ.
ಶನಿವಾರ ರಾತ್ರಿ 7 ಗಂಟೆಯ ನಂತರ ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳು ಜನರಿಂದ ತುಂಬಿ ತುಳುಕುತ್ತಿದ್ದವು. ರಾಜ್ಯದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಜನರ ಪ್ರಯಾಣ ಸಾಗಿದೆ. ಅದರಲ್ಲೂ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿದೆ.
ಶನಿವಾರ ರಾತ್ರಿ ಸಾರಿಗೆ ನಿಗಮದ ಮೂಲಕ ದಾಖಲೆ ಮಟ್ಟದಲ್ಲಿ ಸಾರ್ವಜನಿಕರು ಪ್ರಯಾಣಿಸಿರುವುದು ಕಂಡುಬಂದಿದೆ.
ಕರ್ನಾಟಕ ರಾಜ್ಯ ಸಾರಿಗೆ ನಿಗಮದಿಂದ ಒಟ್ಟು 30,58,458 ಮಂದಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ 35,25,556, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ 24,83,689, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ವತಿಯಿಂದ 15,68,505 ಸೇರಿದಂತೆ 1,06,36,208 ಮಂದಿ ಪ್ರಯಾಣಿಸಿದ್ದಾರೆ.
ಇದರಲ್ಲಿ ಮಹಿಳೆಯರ ಲೆಕ್ಕ ತೆಗೆದುಕೊಂಡರೆ ಕರಾಸಾಸಂ 15,47,020, ಬೆಂಮನಸಾ 18,09,833, ವಾಕರಸಾ 13,36,125, ಕಕರಸಾ 7,37,172 ಸೇರಿದರೆ ಒಟ್ಟು ಮಹಿಳೆಯರು 54,30,150 ಸಂಖ್ಯೆಯಲ್ಲಿ ಪ್ರಯಾಣಿಸಿದ್ದಾರೆ.
ಶನಿವಾರ (ಜೂ.17)ಒಟ್ಟಾರೆ ನಾಲ್ಕು ವಿಭಾಗಗಳಿಂದ ಮಹಿಳಾ ಪ್ರಯಾಣಿಕರ ಟಿಕೆಟ್ ಮೊತ್ತ 12,88,81,618 ರೂ. ಆಗಿದೆ ಎಂದು ಕೆಎಸ್ಆರ್ಟಿಸಿ ಪ್ರಕಟಣೆ ತಿಳಿಸಿದೆ.
ಅಮವಾಸೆ ಹಿನ್ನೆಲೆ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲೂ ವಿಶೇಷ ಪೂಜೆಗಳು ನಡೆಯಲಿವೆ. ಹೀಗಾಗಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಮಹಿಳಾ ಭಕ್ತರು ಕುಟುಂಬ ಸಮೇತರಾಗಿ ಆಗಮಿಸುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ಇನ್ನು ಬಸ್ಗಳಲ್ಲಿ ಸೀಟಿಗಾಗಿ ನೂಕುನುಗ್ಗಲಾಗುತ್ತಿದೆ. ಬಸ್ ಸ್ಟ್ಯಾಂಡ್ಗಳಿಗೆ ಬಸ್ ಬರುತ್ತಿದ್ದಂತೆ ಜನ ಓಡಿ ಹೋಗಿ ಬಸ್ ಹತ್ತುತಿದ್ದಾರೆ. ಮೂರ್ನಾಲ್ಕು ಗಂಟೆಗಳ ಕಾಲ ಕಾದು ಬಸ್ ಹತ್ತಿರುವುದು, , ಬಸ್ಗಳ ಕಿಟಕಿ ಮೂಲಕವೇ ಹತ್ತಲು ಹರಸಾಹಸಪಡುತ್ತಿದ್ದ ದೃಶ್ಯ ಕಂಡು ಬಂದಿದೆ.
ಇನ್ನೂ ಭಾನುವಾರ ರಾತ್ರಿ ಕೂಡ ಧಾರ್ಮಿಕ ಕ್ಷೇತ್ರಗಳಲ್ಲಿ ದರ್ಶನ ಮುಗಿಸಿ ಸಂಜೆ ವೇಳೆಗೆ ಜನ ವಾಪಸ್ಸು ತಮ್ಮ ತಮ್ಮ ಊರುಗಳಿಗೆ ಮರಳಲು ಬಸ್ ನಿಲ್ದಾಣಕ್ಕೆ ಆಗಮಿಸಿದರು. ಗಂಟೆಗಟ್ಟಲೆ ಕಾದು ಬಸ್ ನಲ್ಲಿ ಸೀಟು ಸಿಗದೆ ನಿಂತುಕೊಂಡೆ ಪ್ರಯಾಣಿಸುತ್ತಿರುವುದು ಕಂಡುಬಂತು.
ಒಟ್ಟಾರೆ, ಗೃಹ ಶಕ್ತಿ ಯೋಜನೆ ರಾಜ್ಯದ ಮಹಿಳೆಯರ ನಿದ್ದೆಗೆಡಿಸಿದೆ. ಹೊಸದರಲ್ಲಿ ಈ ರೀತಿ ಆಗುವುದು ಸಾಮಾನ್ಯ. 2-3 ತಿಂಗಳ ಬಳಿಕ
ಸಹಜ ಸ್ಥಿತಿಗೆ ಮರಳಲಿದೆ ಎಂಬುದು ತಜ್ಷರ ಲೆಕ್ಕಚಾರ.