ಇಂದು ಉಚಿತ ಬಸ್ ಪ್ರಯಾಣಕ್ಕೆ ಚಾಲನೆ
ಜುಲೈ 1 ರಂದು ಗುಲ್ಬರ್ಗಾದಲ್ಲಿ ಗೃಹ ಜ್ಯೋತಿ
ಜುಲೈ 16 ರಂದು ಬೆಳಗಾವಿಯಲ್ಲಿ ಗೃಹ ಲಕ್ಷ್ಮಿ ಯೋಜನೆ
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಖಚಿತ, ಆದರೆ ಷರತ್ತುಗಳು ಅಪ್ಲೆ
ಇಂದಿನಿಂದ ಏಕಕಾಲದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಚಾಲನೆ
ವೋಲ್ವೋ, ಎಸಿ ಬಿಟ್ಟು ರಾಜ್ಯದೊಳಗಿನ ಸಂಚಾರ ಉಚಿತ : ಸಿಎಂ ಸಿದ್ದರಾಮಯ್ಯ
ಸುದ್ದಿಮೂಲ ವಾರ್ತೆ, ಮೈಸೂರು, ಮೈಸೂರು, ಜೂ.10
ಮಹಿಳೆಯರ ಉಚಿತ ಸಾರಿಗೆ ಪ್ರಯಾಣ ಯೋಜನೆ ಭಾನುವಾರದಿಂದ (ಇಂದಿನಿಂದ ) ರಾಜ್ಯಾದ್ಯಂತ ಜಾರಿಗೆ ಬರಲಿದೆ. ರಾಜ್ಯದ ಎಲ್ಲಾ ಮಹಿಳೆಯರಿಗೆ ವೋಲ್ವೋ, ಎಸಿ ಬಸ್ ಹೊರತುಪಡಿಸಿ ಎಲ್ಲಾ ಬಸ್ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಆರಂಭವಾಗಲಿದೆ.
ಆದರೆ, ರಾಜ್ಯದೊಳಗೆ ಮಾತ್ರ ಸಂಚಾರಕ್ಕೆ ಉಚಿತ. ಹೊರ ರಾಜ್ಯಗಳ ಪ್ರಯಾಣಕ್ಕೆ ಅನ್ವಯವಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನ ಸುತ್ತೂರು ಹೆಲಿಪ್ಯಾಡ್ನಲ್ಲಿ ಶನಿವಾರ ಮಾತನಾಡಿದ ಅವರು, ನಾಳೆ ಮಧ್ಯಾಹ್ನ 1 ಗಂಟೆಯಿಂದ ಯೋಜನೆ ಜಾರಿಯಾಗಲಿದೆ. ವಿಧಾನಸೌದದ ಬಳಿ ನಾನು, ಡಿಸಿಎಂ ಹಾಗೂ ಸಾರಿಗೆ ಮಂತ್ರಿ ಅಧಿಕೃತವಾಗಿ ಚಾಲನೆ ನೀಡಲಿದ್ದೇವೆ. ಈ ಯೋಜನೆ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಏಕ ಕಾಲದಲ್ಲಿ ಜಾರಿಗೆ ಬರಲಿದೆ ಎಂದು ಹೇಳಿದರು.
ಇದೇ ವೇಳೆ, ಶೇ. 40 ಆರೋಪ ತನಿಖೆಯನ್ನು ನನ್ನ ಇಲಾಖೆಯಿಂದಲೇ ತನಿಖೆ ಆರಂಭಿಸಿ ಎಂಬ
ಮಾಜಿ ಸಚಿವ ಶ್ರೀನಿವಾಸ್ ಪೂಜಾರಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ,
ಬಸವರಾಜ ಬೊಮ್ಮಾಯಿ ಅಥವಾ ಮತ್ಯಾರೋ ಹೇಳಿದರು ಎಂದು ತನಿಖೆ ಮಾಡಲು ಸಾಧ್ಯವಿಲ್ಲ. ಈಗಾಗಲೇ ಪಿಎಸ್ಐ ತನಿಖೆ ನಡೆಯುತ್ತಿದೆ. ಎಡಿಜಿಪಿ ಅಮೃತ್ ಪೌಲ್ ಜೈಲಿನಲ್ಲಿದ್ದಾರೆ ಎಂದರು.
ರಾಜ್ಯದಲ್ಲಿ ಮಳೆ ಕೊರತೆ ಹಾಗೂ ಕುಡಿಯುವ ನೀರಿನ ಸಂಬಂಧ ಅಧಿಕಾರಿಗಳ ಸಭೆ ಸೋಮವಾರ ನಡೆಯಲಿದೆ. ಮಳೆ ಸಮಸ್ಯೆ ಇರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆವೀಡಿಯೋ ಕಾನ್ಫರೆನ್ಸ್ ಮಾಡುವುದಾಗಿ ತಿಳಿಸಿದರು.
ಜುಲ್ಯೆ 1 ರಂದು ಗುಲ್ವರ್ಗದಲ್ಲಿ ಗೃಹಜ್ಯೋತಿಗೆ ಚಾಲನೆ
ಜುಲೈ 1 ರಂದು ಗುಲ್ಬರ್ಗದಲ್ಲಿ ಗೃಹಜ್ಯೋತಿ ಗ್ಯಾರಂಟಿ ಹಾಗೂ ಅಂದೇ ಹತ್ತು ಕೆ.ಜಿ ಆಹಾರ ಧಾನ್ಯ ಕೊಡುವ ಯೋಜನೆಗೆ ಮೈಸೂರಿನಲ್ಲಿ ಚಾಲನೆ ಸಿಗಲಿದೆ. ಜುಲೈ 16 ರಂದು ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿ ಆಗಲಿದೆ .2022-23 ರಲ್ಲಿ ಪರೀಕ್ಷೆಯಲ್ಲಿ ಪಾಸಾದ ಪದವಿ ಹಾಗೂ ಡಿಪ್ಲೋಮಾ ಉದ್ಯೋಗಕಾಂಕ್ಷಿಗಳಿಗೆ ಕೆಲಸ ಸಿಗದಿದ್ದರೆ 24 ತಿಂಗಳುಗಳ ಕಾಲ ಸಹಾಯಧನ ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆ ವಿಚಾರವಾಗಿ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ಸರ್ಕಾರದ ತಲೆನೋವು ನಿಮಗ್ಯಾಕೆ .ನಾವು ಹೇಳಿದಂತೆ ಯೋಜನೆ ಜಾರಿ ಮಾಡುತ್ತೇವೆ ಎಂದರು.
ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿದ್ಯುತ್ ದರವನ್ನ ಪ್ರತಿ ವರ್ಷ
ರೆಗ್ಯುಲೇಟರಿ ಕಮಿಷನ್ ದರ ಪರಿಷ್ಕರಣೆ ಮಾಡುತ್ತದೆ. ಜೂನ್ 1 ರಿಂದ ಜಾರಿ ಮಾಡುತ್ತಾರೆ.
ನಾವು ಅಧಿಕಾರಕ್ಕೆ ಬರುವ ಮುಂಚಿತವಾಗಿ ವಿದ್ಯುತ್ ದರ ಪರಿಷ್ಕರಣೆ ಆಗಿದೆ. ಚುನಾವಣೆ ನೀತಿ ಸಂಹಿತೆಯಿಂದ ತಡೆ ಆಗಿತ್ತು ಎಂದು ಸಮರ್ಥಿಸಿಕೊಂಡರು.
ಮಾಧ್ಯಮಗಳು ದಾರಿ ತಪ್ಪಿಸುತ್ತಿವೆ
ವಿರೋಧ ಪಕ್ಷಗಳ ಜೊತೆಗೆ ಮಾದ್ಯಮಗಳೂ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಕಿಡಿಕಾರಿದ
ಸಿದ್ದರಾಮಯ್ಯನವರು, ಉಚಿತ ವಿದ್ಯುತ್ ಬೇಡ ಅಂದವರಿಗೆ ಬಲವಂತ ಮಾಡುತ್ತಿಲ್ಲ. ಸರಾಸರಿ ಬಳಕೆ ಆಧಾರದಲ್ಲಿ ಶೇಕಡ 10ರಷ್ಟು ವಿದ್ಯುತ್ ನೀಡುತ್ತೇವೆ. ಸುಮ್ಮನೆ ದುಂದು ವೆಚ್ಚ ಮಾಡಲು ಪೂರ್ತಿ 200 ಯೂನಿಟ್ ಕೊಡಲು ಸಾದ್ಯವೇ ಎಂದು ಪ್ರಶ್ನಿಸಿದರು.
ಟಿವಿಗಳಲ್ಲಿ ದಿನವಿಡಿ 200 ಯುನಿಟ್ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ನಾವು ನೀಡಿರುವ ಭರವಸೆಯನ್ನೇ ಮಾಡುತ್ತೇವೆ. ಬಿಜೆಪಿಯವರಂತೆ ಸುಳ್ಳು ಹೇಳುವುದಿಲ್ಲ. ನಾನು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಒಂದೇ ರೀತಿ ಇರುತ್ತೇನೆ ಎಂದು ತಮ್ಮದೇ ಶೈಲಿಯಲ್ಲಿ ಪ್ರತಿಪಾದನೆ ಮಾಡಿದರು.