ಸುದ್ದಿಮೂಲವಾರ್ತೆ
ಹೊಸಕೋಟೆ, ಆ. 19 : ಸರ್ಕಾರದಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳು ಸೇರಿದಂತೆ ನಾನಾ ರೀತಿಯ ಸೌಲಭ್ಯಗಳನ್ನು ನೀಡುವುದರಿಂದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಹೊಸಕೋಟೆ ತಾಲ್ಲೂಕಿನ ಜಡಿಗೇನಹಳ್ಳಿ ಹೋಬಳಿಯ ವಾಗಟ ಗ್ರಾಮದ ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರದಿಂದ ನೀಡಿರುವ ಉಚಿತ ಸಮವಸ್ತ್ರಗಳನ್ನು ವಿತರಿಸಿ ನಂತರ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾತಿ ಮಾಡುವಲ್ಲಿ ನೀಡುವ ಸಹಕಾರ ತುಂಬಾ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಲೆಂದು ಈ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದು, ಉತ್ತಮವಾದ ಅಂಕಗಳನ್ನು ಪಡೆಯುವ ಕಡೆ ಗಮನ ಹರಿಸಬೇಕು ಎಂದು ಕಿವಿ ಮಾತು ಹೇಳೀದರು.
ಗ್ರಾ.ಪಂ. ಅಧ್ಯಕ್ಷೆ ಅಮ್ಮಯ್ಯಮ್ಮ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಹಕ್ಕು ಉಪಯೋಗಿಸಿಕೊಳ್ಳಿ, ಸರ್ಕಾರ ನೀಡುತ್ತಿರುವ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟದ ಪ್ರಯೋಜನ ಸೇರಿದಂತೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಹಲವಾರು ಯೋಜನೆಗಳನ್ನು ಸರ್ಕಾರವು ಜಾರಿಗೆ ತಂದಿದ್ದು ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಬೇಕು. ಶಿಕ್ಷಣ ಯಾರು ಕದಿಯಲಾರದ ಆಸ್ತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಕಂಠಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ್,, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ಹೇಮಲತಾ,ಮುಖಂಡರಾದ ನರೇಂದ್ರ ಹಾಗೂ ಇತರರು ಉಪಸ್ಥಿತರಿದ್ದರು.