ಸುದ್ದಿಮೂಲ ವಾರ್ತೆ
ಅ.29:ಮುಂದಿನ ವರ್ಷ ನಡೆಯಲಿರುವ ಛತ್ತೀಸ್ಗಢ ರಾಜ್ಯದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದ ಪ್ರಚಾರ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿಯವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೆಜಿ (ಪೂರ್ವ-ಪ್ರಾಥಮಿಕ) ದಿಂದ ಪಿಜಿ (ಸ್ನಾತೋಕತ್ತರ -ಪದವಿ) ಯವರೆಗೆ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಿರುವುದು ಒಂದು ಉತ್ತಮ ಬೆಳವಣಿಗೆ. ಇದು ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಮಹತ್ವದ ಸುದ್ದಿಯಾಗಿದೆ.
ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ ಇದನ್ನು ಸ್ವಾಗತಿಸುತ್ತದೆ. ಕಳೆದ ಎರಡು ದಶಕದಿಂದ ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ ಹಾಗು ಶಿಕ್ಷಣದ ಹಕ್ಕಿಗಾಗಿ ಅಖಿಲ ಭಾರತ ವೇದಿಕೆಯು ಇದಕ್ಕಾಗಿ ಒತ್ತಾಯಿಸುತ್ತಾ ಬಂದಿದೆ.
ಈ ಹಿಂದೆ ತೆಲಂಗಣ ಸರ್ಕಾರ ಕೂಡ ಈ ಬಗ್ಗೆ ಘೋಷಣೆ ಮಾಡಿತ್ತು .
ಇದು ಕೇವಲ ಒಂದು ರಾಜ್ಯಕ್ಕೆ ಸೀಮಿತವಾಗದೆ, ರಾಷ್ಟ್ರ ಮಟ್ಟದಲ್ಲಿ ಶಿಕ್ಷಣವನ್ನು ಒಂದು ಮೂಲಭೂತ ಆದ್ಯತೆಯನ್ನಾಗಿ ಗುರುತಿಸಿ, ಮುಂದಿನ ಪಾರ್ಲಿಮೆಂಟರಿ ಚುನಾವಣೆಯಲ್ಲಿ ಕೆಜಿ (ಪೂರ್ವ-ಪ್ರಾಥಮಿಕ) ದಿಂದ ಪಿಜಿ (ಸ್ನಾತೋಕತ್ತರ -ಪದವಿ) ಯವರೆಗೆ ನೆರೆಹೊರೆಯ ಶಾಲಾ-ಕಾಲೇಜುಗಳಲ್ಲಿ ಉಚಿತ ಶಿಕ್ಷಣವನ್ನು ಒದಗಿಸುವ ಭರವಷೆಯನ್ನು ಒಂದು ಗ್ಯಾರಂಟಿ ಮತ್ತು ಕನಿಷ್ಠ ಕಾರ್ಯಕ್ರಮವಾಗಿ ಇಂಡಿಯಾ ಒಕ್ಕೂಟವು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿಬೇಕೆಂದು ಫಾಫ್ರೆ ಒತ್ತಾಯಿಸುತ್ತದೆ.
ಶಿಕ್ಷಣ ಅತ್ಯಂತ ವೇಗವಾಗಿ ಖಾಸಗೀಕರಣ, ವ್ಯಾಪರೀಕರಣ ಮತ್ತು ಕಾರ್ಪೋರೇಟರೀಕರಣಗೊಳ್ಳುತ್ತಿರುವ ಈ ಕಾಲದಲ್ಲಿ , ಸಂವಿಧಾನದ ಆಶಯದ ಅನ್ವಯ ಭಾರತವನ್ನು ನಿಜವಾಗಿಯು ಒಂದು ಸಾರ್ವಭೌಮ, ಸಮಾಜವಾದಿ,ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿಸುವ ಆಶಯವನ್ನು ಹೊಂದಿರುವ ಯಾವುದೇ ಪಕ್ಷ/ಒಕ್ಕೂಟ ಕನಿಷ್ಠ ಕೆಜಿ ಯಿಂದ ಪಿಯುಸಿಯವರೆಗಾದರು ಎಲ್ಲಾ ಮಕ್ಕಳಿಗೆ ನೆರೆಹೊರೆಯ ಶಾಲೆಯಲ್ಲಿ ಉಚಿತ ಗುಣಾತ್ಮಕ ಶಿಕ್ಷಣ ಒದಗಿಸುವುದನ್ನು ಒಂದು ರಾಷ್ಟ್ರೀಯ ಪ್ರಮುಖ ಕಾರ್ಯಕ್ರಮವಾಗಿ ಸ್ವೀಕರಿಸಬೇಕಿದೆ.
ದೇಶದಲ್ಲಿ ಇಂದು ಛಿದ್ರಕಾರಿ ಹಾಗು ವಿಭಜಕ ಶಕ್ತಿಗಳು ಶಿಕ್ಷಣದ ಹೆಸರಿನಲ್ಲಿ ಅವೈಜ್ಞಾನಿಕ ಹಾಗು ಅಂಧಶ್ರದ್ಧೆಯ ಮೂಲಕ ಶಿಕ್ಷಣವನ್ನು ಕೋಮುವಾದೀಕರಣಗೊಳಿಸಿ ದೇಶವನ್ನು ಹಿಂದಕ್ಕೆ ಕೊಂಡೊಯ್ಯಲು ಹವಣಿಸುತ್ತಿರುವ ಈ ಸಂದರ್ಭದಲ್ಲಿ, ಎಲ್ಲಾ ಮಕ್ಕಳಿಗೆ ಕನಿಷ್ಠ ಕೆಜಿ ಯಿಂದ ಪಿಯುಸಿ ಯವರೆಗಾದರು ಸಂವಿಧಾನದ ಆಶಯಗಳ ಅನ್ವಯ ಆಧುನಿಕ, ವೈಜ್ಞಾನಿಕ ಮತ್ತು ಸಮಾನ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿಸಲು ಪೂರ್ವಾಪೇಕ್ಷಿತ ಅಗತ್ಯವಾಗುತ್ತದೆ. ನಂತರ, ಅದನ್ನು ಪಿಜಿಯವರೆಗೆ ವಿಸ್ತರಿಸಬಹುದಾಗಿದೆ.
ಇದೇ ಸಂದರ್ಭದಲ್ಲಿ , ರಾಹುಲ್ ಗಾಂಧಿಯವರ ಈ ಆಶಯವನ್ನು ನಮ್ಮ ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ಮಾನ್ಯ ಸಿದ್ದರಾಮಯ್ಯ ನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಶಿಕ್ಷಣ ಹಕ್ಕು ಕಾಯಿದೆಗೆ ಸೂಕ್ತ ತಿದ್ದುಪಡಿ ಮಾಡುವ ಮೂಲಕ 8 ವರ್ಷದ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕೆ ಎರಡು ವರ್ಷದ ಪೂರ್ವ-ಪ್ರಾಥಮಿಕ ಮತ್ತು 9 ರಿಂದ 12 ನೇ ತರಗತಿಗಳನ್ನು ಒಳಮಾಡಿಕೊಳ್ಳಲು ಕೆಳಮುಖ ಮತ್ತು ಮೇಲ್ಮುಖ ವಿಸ್ತರಣೆಗೆ ಅಧಿವೇಶನದಲ್ಲಿ ಮಸೂದೆಯೊಂದನ್ನು ಮಂಡಿಸಬೇಕೆಂದು ಫಾಪ್ರೆ ಒತ್ತಾಯಿಸುತ್ತದೆ. ಆ ಮೂಲಕ ಕನಿಷ್ಠ ಕೆಜಿ ಯಿಂದ ಪಿಯುಸಿಯವರೆಗೆ ಶಿಕ್ಷಣವನ್ನು ಒಂದು ಮೂಲಭೂತ ಹಕ್ಕೆಂದು ಪರಿಗಣಿಸಿ ಕಾನೂನುಬದ್ಧಗೊಳಿಸುವ ಮೊದಲ ರಾಜ್ಯ ಕರ್ನಾಟಕವಾಗಲಿದೆ . ಕರ್ನಾಟಕದ ಈ ಹೆಜ್ಜೆ ರಾಹುಲ್ ಗಾಂಧಿಯವರ ಕೆಜಿ (ಪೂರ್ವ-ಪ್ರಾಥಮಿಕ) ಯಿಂದ ಪಿಜಿ (ಸ್ನಾತೋಕತ್ತರ ಪದವಿ) ಯವರೆಗಿನ ಉಚಿತ ಶಿಕ್ಷಣದ ಆಶಯಕ್ಕೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಶಕ್ತಿ ತುಂಬುತ್ತದೆ.
ನಿರಂಜನಾರಾಧ್ಯ.ವಿ.ಪಿ
ಪ್ರಧಾನ ಸುಗಮಕಾರ ಹಾಗು ಅಭಿವೃದ್ಧಿ ಶಿಕ್ಷಣ ತಜ್ಞ