ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಮೇ 26: ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈಯಪ್ಪನಹಳ್ಳಿ ಗ್ರಾಮದ ಕಾಲುವೆ ಅಭಿವೃದ್ಧಿ ಕಾಮಗಾರಿ ಮತ್ತು ವೆಂಕಟಕೃಷ್ಣಮ್ಮನಹಳ್ಳಿ ಗ್ರಾಮದ ಗೋಮಾಳದ ಗೋಕುಂಟೆ ಕಾಮಗಾರಿಯ ಬಳಿ ಮನರೇಗಾ ಯೋಜನೆಯಡಿಯ ಕಾಮಗಾರಿ ಸ್ಥಳದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದೆ.
ಆರೋಗ್ಯ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ನರೇಗಾ ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ಉಚಿತ ಗ್ರಾಮ ಆರೋಗ್ಯ ಅಭಿಯಾನದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜ ಮಾತನಾಡಿ, ಗ್ರಾಮ ಪಂಚಾಯತಿ ಆರೋಗ್ಯ ಅಮೃತ ಅಭಿಯಾನದಡಿ 2023 ಮೇ 22ರಿಂದ ಜೂನ್ 22ರವರೆಗೆ ಮನರೇಗಾ ಕಾಮಗಾರಿಯಲ್ಲಿ ಕೆಲಸ ಮಾಡುವ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲು ಗ್ರಾಮ ಆರೋಗ್ಯ ಕಾರ್ಯಕ್ರಮ ಆರಂಭಿಸಿದ್ದು, ಪ್ರತಿಯೊಬ್ಬ ಕೂಲಿಕಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಕೂಲಿ ಕಾರ್ಮಿಕರು ನಿಯಮಿತವಾಗಿ ಅರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.
ಬೈಯಪ್ಪನಹಳ್ಳಿ ಮತ್ತು ವೆಂಕಟಕೃಷ್ಣಮ್ಮನಹಳ್ಳಿ ಗ್ರಾಮದ ಕಾಮಗಾರಿ ಸ್ಥಳದಲ್ಲಿ ಆಯೋಜಿಸಿದ ಗ್ರಾಮ ಆರೋಗ್ಯ ಕಾರ್ಯಕ್ರಮದಲ್ಲಿ 60 ಜನರಿಗೆ ಬಿಪಿ, ಶುಗರ್, ಟಿಬಿ, ಅನಿಮಿಯಾ ಕಾಯಿಲೆಗಳ ತಪಾಸಣೆ ಮಾಡಲಾಯಿತು. ನರೇಗಾ ಕೆಲಸದ ಬಗ್ಗೆ ಹಾಗೂ ವೈಯುಕ್ತಿಕ ಹಾಗೂ ಸಮುದಾಯದ ಕಾಮಗಾರಿಗಳ ಬಗ್ಗೆ ಕೂಲಿ ಕಾರ್ಮಿಕರು ಸಮಗ್ರವಾಗಿ ಮಾಹಿತಿಯನ್ನು ತಿಳಿಸಲಾಯಿತು.
ನರೇಗಾ ಸಹಾಯಕ ನಿರ್ದೇಶಕರವರಾದ ಚಂದ್ರಪ್ಪ, ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು, ಆರೋಗ್ಯ ಅಭಿಯಾನದ ತಾಲ್ಲೂಕು ಸಂಯೋಜಕರು, ತಾಲ್ಲೂಕು ನರೇಗಾ ಸಂಯೋಜಕರಾದ ಲೋಕೇಶ, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಸೇರಿದಂತೆ 60 ಜನ ಕೂಲಿಕಾರರು ಇದ್ದರು.