ಬೇತಮಂಗಲ: ಬದಲಾದ ಜೀವನಶೈಲಿ ಮತ್ತು ಒತ್ತಡದ ಬದುಕಿನ ನಡುವೆ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಇದರ ನಿವಾರಣೆಗೆ ಆರೋಗ್ಯ ಶಿಬಿರ ಸಹಕಾರಿ ಎಂದು ಗ್ರಾ.ಪಂ ಅಧ್ಯಕ್ಷ ರಾಂಬಾಬು ತಿಳಿಸಿದರು.
ಪಟ್ಟಣದ ಸಮೀಪದ ಸುಂದರಪಾಳ್ಯ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಎಂ.ಎಸ್.ರಾಮಯ್ಯ ಆಸ್ಪತ್ರೆಯ ಸಹಯೋಗದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಹಳ್ಳಿಗಳಲ್ಲಿ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಿ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಬಹುದು. ಆರೋಗ್ಯ ಇದ್ದರೆ ನಾವು ಸುಖಕರ ಜೀವನವನ್ನು ರೂಪಿಸಬಹುದು ಆದ್ದರಿಂದ ಜನರು ಹೆಚ್ಚಾಗಿ ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು ಮತ್ತು ಯಾವುದೇ ಕಾಯಿಲೆಗೆ ಒಳಗಾಗದಂತೆ ಎಚ್ಚರ ವಹಿಸಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದ್ರೋಗ ಹಾಗೂ ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿವೆ. ಇಂತಹ ಕಾಯಿಲೆಗಳಿಗೆ ಬಡ ಜನರು ಹಣ ಹೊಂದಿಸುವುದು ಅಸಾದ್ಯ ಎಂದರು.
ಈ ಶಿಬಿರದಲ್ಲಿ ಸುಮಾರು 500ಕ್ಕೂ ಹೆಚ್ಚುಸಾರ್ವಜನಿಕರು ರಕ್ತದೊತ್ತಡ, ಮಧುಮೇಹ, ಕಣ್ಣಿನ ಪರೀಕ್ಷೆ, ಸ್ತ್ರೀಯರ ಸಮಸ್ಯೆ,, ಇಸಿಜಿ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ನುರಿತ ವೈದ್ಯ ತಜ್ಞರಿಂದ ತಪಾಸಣೆ ಮಾಡಿಸಿಕೊಂಡರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಪ್ರಸಾದ್ ಸ್ವಾಮಿ, ವೆಂಕಟ್ರಾಮಪ್ಪ, ನಾಗರಾಜ್, ನಾರಾಯಣಸ್ವಾಮಿ, ಕಮಲೇಶ್ ಮತ್ತು ಆಸ್ಪತ್ರೆಯ ವೈದ್ಯಾದಿಕಾರಿಗಳು ಸೇರಿದಂತೆ ಅನೇಕ ಮಂದಿ ಸಾರ್ವಜನಿಕರು ಭಾಗವಹಿಸಿದ್ದರು.
ಫೋಟೋ ಕ್ಯಾಪ್ಷನ್
ಬೇತಮಂಗಲದ ಸಮೀಪದ ಸುಂದರಪಾಳ್ಯ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.