ಸುದ್ದಿಮೂಲ ವಾರ್ತೆ
ಹೊಸಕೋಟೆ, ಜು 7 : ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಎಲ್ಲಾ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಆರ್ವಿ ಮತ್ತು ಎಂಎಸ್ ಪಿ ಲಸಿಕೆ ದಾಸ್ತಾನು ಅಗತ್ಯದಷ್ಟು ಇದ್ದು, ಪ್ರಾಣಿಜನ್ಯ ರೋಗಗಳಿಂದ ಬಾಧಿತ ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳುವಂತೆ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗುರುರಾಜ್ ಕರೆ ನೀಡಿದರು.
ಹೊಸಕೋಟೆ ತಾಲೂಕಿನ ಡಿ. ಹೊಸಹಳ್ಳಿಯಲ್ಲಿ ತಾಲೂಕು ಪಶುಪಾಲನ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ, ಆರೋಗ್ಯ ಇಲಾಖೆ ಸಹಯೋಗದಲ್ಲಿ 2023ರ ವಿಶ್ವ ಪ್ರಾಣಿಜನ್ಯ ರೋಗಗಳ ದಿನಾಚರಣೆ ಅಂಗವಾಗಿ ಸಾಕು ನಾಯಿಗಳಿಗೆ ರೇಬಿಸ್ ಲಸಿಕೆ ನೀಡಲಾಯಿತು.
ಪ್ರಾಣಿಜನ್ಯ ರೋಗಗಳಾದ ಕುರಿಗಳಿಂದ ಹಳದಿ ರೋಗ, ಆಂಫ್ರಾಕ್ಸ್, ನಾಯಿ ಮತ್ತು ಬೆಕ್ಕುಗಳಿಂದ ರೇಬಿಸ್, ಕೋಳಿಗಳಿಂದ ಬರ್ಡ್ ಪ್ರೊ ಹೀಗೆ ನಾನಾ ಕಾಯಿಲೆಗಳ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರ್ವೇ ಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಗ್ರಾಮೀಣ ಭಾಗದ ಕ್ಷೇತ್ರ ಮಟ್ಟದಲ್ಲಿ ಆರೋಗ್ಯ ಸೇವೆ ನೀಡುವ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಪ್ರಾಣಿಜನ್ಯ ರೋಗಗಳ ಕುರಿತ ರೋಗಲಕ್ಷಣ, ಚಿಕಿತ್ಸೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಂಪೂರ್ಣ ಆರೋಗ್ಯ ಶಿಕ್ಷಣ ನೀಡಲಾಗಿದೆ ಎಂದರು.
ದೇವನಗುಂದಿ ಗ್ರಾ.ಪಂ ಅಧ್ಯಕ್ಷ ವಿಜಯ ಕುಮಾರ್ ಮಾತನಾಡಿ, ಸಾರ್ವಜನಿಕರು ಸರ್ಕಾರಿ ಸೇವೆಗಳನ್ನು ಪಡೆಯಲು ಮುಂದೆ ಬರಬೇಕು. ಡಿ.ಹೊಸಹಳ್ಳಿ ಪಶು ವೈದ್ಯಕೀಯ ಆಸ್ಪತ್ರೆಯ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಪ್ರಶಂಶಿಸಿದರು.
ಕಾರ್ಯಕ್ರಮ ಸಂಯೋಜಕಿ ಡಾ. ಗಾಯಿತ್ರಿ, ಪಶುವೈದ್ಯಾಧಿಕಾರಿ ಬರ್ಗಿಸ್ ಫಾತಿಮಾ, ಪಶು ಪರೀಕ್ಷಕರಾದ ಚಂದ್ರಕಲಾ, ಸಹಾಯಕ ಶಿವಕುಮಾರ್, ಗ್ರಾಮಸ್ಥರು ಸಾಕುಪ್ರಾಣಿಗಳೊಂದಿಗೆ ಹಾಜರಿದ್ದರು .