ಸುದ್ದಿಮೂಲವಾರ್ತೆ
ಕೊಪ್ಪಳ,ಅ.2: ಗಾಂಧಿ ಜಯಂತಿ ನಿಮಿತ್ಯ ಅ.2 ರಂದು ಶಿಕ್ಷಕರ ಕಲಾ ಬಳಗ, ಕಲರವ ಶಿಕ್ಷಕರ ಬಳಗ, ಅಶೋಕ ಸರ್ಕಲ್ ತಂಡ ನೇತೃತ್ವದಲ್ಲಿ ಗಾಂಧಿವಾದಿಗಳು, ಚಿಂತಕರು ಸಾಹಿತಿಗಳು ಸೇರಿ ನಮ್ಮ ನಡಿಗೆ ಗಾಂಧೀಯೆಡೆಗೆ ಕೊಪ್ಪಳದಿಂದ ಭಾನಾಪೂರದವರೆಗೆ ಪಾದಯಾತ್ರೆ ನಡೆಸಿದರು.
ಬೆಳಗ್ಗೆ 5 ಕ್ಕೆ ಅಶೋಕ ಸರ್ಕಲ್ ನಲ್ಲಿ ಪಾದಯಾತ್ರೆಗೆ ಚಾಲನೆ ನೀಡಿದ ಸಂಸದರಾದ ಸಂಗಣ್ಣ ಕರಡಿ ಮಹಾತ್ಮಾ ಗಾಂಧಿಜಿಯವರು ಪ್ರತಿಪಾದಿಸಿ ಜೀವನದಲ್ಲಿ ಅಳವಡಿಸಿಕೊಂಡ ಸ್ವಚ್ಚತೆ , ಮಧ್ಯಪಾನ ನಿಷೇಧಗಳ ಕುರಿತು ಮಾತನಾಡಿ ಗಾಂಧೀಜಿಯವರ ತತ್ವಗಳ ಹಾದಿಯಲ್ಲಿ ನಾವೆಲ್ಲ ಸಾಗಬೇಕಿದೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮಾ ನಿತ್ಯ ಸ್ಮರಣಿಯರು ಎಂದರು. ಈ ಸಂದರ್ಭದಲ್ಲಿ ತಹಶಿಲ್ದಾರ ವಿಠಲ ಚೌಗಲೆ ಉಪಸ್ಥಿತರಿದ್ದರು.
ಅಶೋಕ ಸರ್ಕಲ್ ನಿಂದ ಹೊರಟ ಪಾದಯಾತ್ರೆ ಬೆಳಗ್ಗೆ ಎಂಟೂವರೆಗೆ ಭಾನಾಪೂರ ರೈಲು ನಿಲ್ದಾಣ ತಲುಪಿತು. 1934 ಮಾರ್ಚ್ 3 ರಂದು ಸ್ವಾತಂತ್ರ್ಯ ಹೋರಾಟ ನಿಮಿತ್ಯ ಬಳ್ಳಾರಿಯಿಂದ ಹುಬ್ಬಳ್ಳಿಗೆ ರೈಲಿನಲ್ಲಿ ಹೊರಟಿದ್ದ ಮಹಾತ್ಮಾ ಗಾಂಧಿಯವರು ಭಾನಾಪೂರ ರೈಲು ನಿಲ್ದಾಣದಲ್ಲಿ ಇಳಿದು ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಅಸ್ಪೃಶ್ಯತೆ ವಿರುದ್ದವಾಗಿ ದಲಿತ ಬಾಲಕಿಗೆ ತಮ್ಮ ಕೈಯಾರೆ ನೀರು ಕುಡಿಸಿದ್ದರು.
ಗಾಂಧೀಜಿಯವರ ಭಾನಾಪೂರ ಭೇಟಿ ನೆನಪಿಗಾಗಿ ರೈಲು ನಿಲ್ದಾಣದಲ್ಲಿ 1998ರಲ್ಲಿ ಗಾಂಧೀಜಿಯವರ ಭಾವಚಿತ್ರ ಅನಾವರಣಗೊಳಿಸಲಾಗಿದೆ. ಅಲ್ಲಿಗೆ ತಲುಪಿದ ಪಾದಯಾತ್ರಿಗಳು ರಘುಪತಿ ರಾಘವ ರಾಜಾರಾಂ… ಭಜನ್ ಹಾಡಿ ಧ್ಯಾನ ಮಾಡಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಗಾಂಧೀಜಿಯವರ ಚಿಂತನೆ ತತ್ವಗಳ ಕುರಿತು ಅನೇಕ ಮಹನೀಯರು ಮಾತನಾಡಿದರು.
ವೇದಿಕೆಯಲ್ಲಿ ಶಿಕ್ಷಕರ ಕಲಾ ಬಳಗದ ಪ್ರಾಣೇಶ ಪೂಜಾರ, ರಾಮಣ್ಣ ಶ್ಯಾವಿ, ಶಿಕ್ಷಕರ ಕಲರವದ ಹನುಮಂತಪ್ಪ ಕುರಿ, ಚಿಂತಕರಾದ ಅಮರದೀಪ್, ಸಾವಿತ್ರಿ ಮುಜುಮದಾರ, ಪ್ರಗತಿಪರ ಕೃಷಿಕ ಆನಂದತೀರ್ಥ ಪ್ಯಾಟಿ, ಪ್ರಮೋದ ಕುಲಕರ್ಣಿ, ಶಿವಪ್ಪ ಹಡಪದ, ಮಕ್ಬೂಲ್ ರಾಯಚೂರು, ನಾಗರಾಜ ನಾಯಕ ಡೊಳ್ಳಿನ, ಡಾ. ಪ್ರಭುರಾಜ ನಾಯಕ, ಶಂಕ್ರಯ್ಯ ಅಭ್ಬಿಗೇರಿಮಠ, ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್, ಚಂದ್ರಶೇಖರಯ್ಯ ಹಿರೇಮಠ, ಶೇಖಪ್ಪ ಹರಿಜನ, ದೇವಪ್ಪ ಶಿರೂರು, ರೈಲು ನಿಲ್ದಾಣದ ಗಾಂಧೀಜಿಯವರ ಚಿತ್ರ ಬಿಡಿಸಿದ ಕಲಾವಿದ ಕಾಳಪ್ಪ ಪತ್ತಾರ ಇತರರು ಉಪಸ್ಥಿತರಿದ್ದರು.