ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.14: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಬಿಬಿಎಂಪಿ ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರೆ, ಮತ್ತೋರ್ವ ಆಕಾಂಕ್ಷಿ ಕೆಜಿಎಫ್ ಬಾಬು ತಮ್ಮ ಪತ್ನಿ ಶಾಜಿಯಾ ಅವರಿಂದ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಚಿಕ್ಕಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಇನ್ನೂ ಘೋಷಣೆ ಆಗಿಲ್ಲ. ಇಲ್ಲಿ ಕಳೆದ ಬಾರಿ ಪರಾಜಿತ ಅಭ್ಯರ್ಥಿ ಆರ್.ವಿ. ದೇವರಾಜ್ ಪ್ರಮುಖ ಆಕಾಂಕ್ಷಿ ಆಗಿದ್ದಾರೆ. ಈ ಮಧ್ಯೆ ಗಂಗಾಂಬಿಕೆ ಮತ್ತು ಕೆಜಿಎಫ್ ಬಾಬು ಸಹ ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಸಿದ್ದಾರೆ. ಕಾಂಗ್ರೆಸ್ ಟಿಕೆಟ್ ಘೋಷಣೆಯಾಗುವುದಕ್ಕೆ ಮೊದಲೇ ಗಂಗಾಂಬಿಕೆ ಪಕ್ಷೇತರರಾಗಿ ಅರ್ಜಿ ಸಲ್ಲಿಸಿದರೆ, ಕೆಜಿಎಫ್ ಬಾಬು ತಮ್ಮ ಪತ್ನಿಯನ್ನು ಪಕ್ಷೇತರರಾಗಿ ಕಣಕ್ಕಿಳಿಸುವ ಮೂಲಕ ತಾವು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.
ಗಂಗಾಂಬಿಕೆ ಮತ್ತು ಶಾಜಿಯಾ ಅವರ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಜಯನಗರದ ಸೌತ್ಎಂಡ್ ಬಳಿ ಇರುವ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾ ಕಚೇರಿ ಸುತ್ತಮುತ್ತ ಬಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ನೆರೆದಿದ್ದರು. ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದರು.
‘ಬಿ–ಫಾರಂ ಸಲ್ಲಿಸಲು ಏಪ್ರಿಲ್ 20ರ ತನಕ ಅವಕಾಶ ಇದೆ. ಚಿಕ್ಕಪೇಟೆಯಲ್ಲಿ ಎಲ್ಲ ವರ್ಗದ ಜನರೂ ನೆಲೆಸಿದ್ದಾರೆ. ನನಗೆ ಟಿಕೆಟ್ ನೀಡಿದರೆ ಕೆಜಿಎಫ್ ಬಾಬು ಅವರು ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ’ ಎಂದು ಗಂಗಾಂಬಿಕೆ ಹೇಳಿದರು.
ಕೆಜಿಎಫ್ ಬಾಬು ಮಾತನಾಡಿ, ‘ನನ್ನ ಜಮೀನು ವೀಕ್ಷಣೆಗೆ ತೆರಳಿದ್ದ ವೇಳೆ ಅಲ್ಲೇ ಇದ್ದ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದೇನೆ. ಅವರ ಆಶೀರ್ವಾದ ಪಡೆದುಕೊಂಡಿದ್ದೇನೆ. ನಾನು ಜೆಡಿಎಸ್ನಿಂದ ಟಿಕೆಟ್ ಕೇಳಿಲ್ಲ. ಗಂಗಾಂಬಿಕೆ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಗಂಗಾಂಬಿಕೆ ಅವರು ಮೇಯರ್ ಆಗಿದ್ದ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಇಬ್ಬರಲ್ಲಿ ಯಾರಿಗಾದರೂ ಕಾಂಗ್ರೆಸ್ ಟಿಕೆಟ್ ನೀಡಲಿ. ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.