ಸುದ್ದಿಮೂಲ ವಾರ್ತೆ ,
ಸುದ್ದಿಮೂಲವಾರ್ತೆ ಗಂಗಾವತಿ,ಏ.೬- ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಗೆ ಗಂಗಾವತಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಘೋಷಿಸಿದ್ದರ ಹಿನ್ನೆಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬಣದಲ್ಲಿ ಗುರುತಿಸಿಕೊಂಡಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಆರ್.ಶ್ರೀನಾಥ್ ಮತ್ತು ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪರ ಬಣಕ್ಕೆ ನಿರಾಸೆಯೊಂದಿಗೆ ಹಿನ್ನೆಡೆ ಉಂಟಾಗಿದೆ.
ಈ ಬಾರಿ ಗಂಗಾವತಿ ವಿಧಾನ ಸಭಾ ಕ್ಷೇತ್ರದಿಂದ ಇಕ್ಬಾಲ್ ಅನ್ಸಾರಿ, ಹೆಚ್.ಆರ್.ಶ್ರೀನಾಥ್ ಹಾಗೂ ಮಲ್ಲಿಕಾರ್ಜುನ ನಾಗಪ್ಪ ಈ ಮೂವರು ಕಾಂಗ್ರೆಸ್ ಟಿಕೆಟ್ಗೆ ಅರ್ಜಿ ಸಲ್ಲಿಸಿ ಪ್ರಬಲ ಆಕಾಂಕ್ಷಿಗಳಾಗಿದ್ದರು. ಇಕ್ಬಾಲ್ ಅನ್ಸಾರಿಯ ಒಂದು ಬಣ ಮತ್ತು ಹೆಚ್.ಆರ್. ಶ್ರೀನಾಥ್ ಹಾಗೂ ಮಲ್ಲಿಕಾರ್ಜುನ ನಾಗಪ್ಪರವರ ಒಂದು ಬಣಗಳಾಗಿ ಗಂಗಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಈವರೆಗೂ ಪಕ್ಷದ ವೇದಿಕೆ ಮತ್ತು ಪ್ರಚಾರ ಕಾರ್ಯಕ್ರಮಗಳನ್ನು ಈ ಎರಡೂ ಬಣಗಳು ಪ್ರತ್ಯೇಕವಾಗಿ ನಡೆಸಿವೆ.
ಇಕ್ಬಾಲ್ ಅನ್ಸಾರಿ ನನಗೇ ಟಿಕೆಟ್ ನೀಡಬೇಕೆಂದು ಹಠಕ್ಕೆ ಬಿದ್ದಿದ್ದರು. ಗುರುವಾರ ಬೆಳಿಗ್ಗೆ ಪಕ್ಷದ ಹೈ ಕಮಾಂಡ್ ಬಿಡುಗಡೆಗೊಳಿಸಿದ ಅಭ್ಯರ್ಥಿಗಳ ದ್ವಿತೀಯ ಪಟ್ಟಿಯಲ್ಲಿ ಇಕ್ಬಾಲ್ ಅನ್ಸಾರಿ ಘೋಷಿಸಲಾಗಿದೆ. ಇತ್ತ ಹೆಚ್.ಆರ್.ಶ್ರೀನಾಥ್ ತಮಗೇ ಟಿಕೆಟ್ ಬೇಕೆಂದು ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವುಮಾರ ಹಾಗೂ ರಾಜ್ಯ ಸಭೆ ಸದಸ್ಯ ಬಿ.ಕೆ.ಹರಿಪ್ರಸಾದ್ ದಿಂಬಾಲು ಬಿದ್ದರೂ ಇವರ ಹೆಸರು ಘೋಷಣೆ ಆಗಿಲ್ಲ. ಮಲ್ಲಿಕಾರ್ಜುನ ನಾಗಪ್ಪ ಕೂಡ ಟಿಕೆಟ್ ನೀಡುವುದಾದರೆ ನನಗೆ ನೀಡಿ ಇಲ್ಲವೇ ಹೆಚ್.ಆರ್.ಶ್ರೀನಾಥ್ರಿಗೆ ನೀಡಿ ಇಕ್ಬಾಲ್ ಅನ್ಸಾರಿಯವರಿಗೆ ಮಾತ್ರ ನೀಡಬೇಡಿ ಎಂದು ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದರು. ಆದರೆ ಮೊದಲನೆ ಹಂತದಲ್ಲಿ ಅನ್ಸಾರಿ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಘೋಷಣೆ ಮಾಡಿಸುವಲ್ಲಿ ಯಶ ಕಂಡಿದ್ದಾರೆ.
ಅನ್ಸಾರಿ ಬಣ ಒಂದಾದರೆ ಹೆಚ್. ಆರ್. ಶ್ರೀನಾಥ್, ಮಲ್ಲಿಕಾರ್ಜುನ ಇವರದು ಒಂದು ಬಣ ಇದ್ದು, ಈವೆಗೂ ಈ ಎರಡೂ ಬಣಗಳು ಹಾವು-ಮುಂಗುಸಿಯಂತಿವೆ. ಈಗ ಅನ್ಸಾರಿಗೆ ಹೈಕಮಾಂಡ್ ಟಿಕೇಟ್ ಘೋಷಿಸಿದಂತೆ ಕೊನೆ ಘಟ್ಟದಲ್ಲಿ ಬಿ ಫಾರ್ಮ್ ಅನ್ಸಾರಿಗೆ ನೀಡಿದ್ದೇಯಾದರೆ, ಹೆಚ್.ಆರ್.ಶ್ರೀನಾಥ್ ಮತ್ತು ಮಲ್ಲಿಕಾರ್ಜುನ ನಾಗಪ್ಪರ ಬಣದ ಮುಂದಿನ ನಿಲುವು ಬದಲಾಗುವ ಸಾಧ್ಯತೆಯಿದೆ. ಕಾಂಗ್ರೆಸ್ಸಿನಲ್ಲಿದ್ದುಕೊಂಡೇ ಅನ್ಸಾರಿ ಸೋಲಿಸುವ ಒಳ ತಂತ್ರಗಾರಿಕೆ ನಡೆಸಬಹುದು. ಇಲ್ಲವೇ ಕಾಂಗ್ರೆಸ್ ತೊರೆದು ಬೇರೆ ಪಕ್ಷ ಸೇರುಬಹುದು ಯಾವುದಕ್ಕೂ ಕಾದು ನೋಡಬೇಕಷ್ಟೆ.