ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.9: ಡಬಲ್ ಎಂಜಿನ್ ಸರಕಾರವು ಕನ್ನಡಿಗರಲ್ಲಿ ಯುವಕರು, ಮಹಿಳೆಯರು, ಕಾರ್ಮಿಕರು ಸೇರಿದಂತೆ ಎಲ್ಲರ ಮನ ಗೆದ್ದಿದೆ. ಮುಂದಿನ ಅವಧಿಯಲ್ಲಿ ಕನ್ನಡಿಗರು ಬಿಜೆಪಿಯನ್ನು ಗೆಲ್ಲಿಸುವುದು ಖಚಿತ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯ ಅವರು ತಿಳಿಸಿದರು.
ಹುಬ್ಬಳ್ಳಿ ಮಾಧ್ಯಮ ಕೇಂದ್ರದ ಉದ್ಘಾಟನೆ ಸಂದರ್ಭದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರತಿಯೊಬ್ಬ ಕನ್ನಡಿಗರ ಆಶಯವನ್ನು ಈಡೇರಿಸಲು ಬಿಜೆಪಿ ಬದ್ಧವಾಗಿದೆ ಎಂದ ಅವರು, ಕೇಂದ್ರದ ನರೇಂದ್ರ ಮೋದಿಜಿ ಅವರ 9 ವರ್ಷಗಳ ಆಡಳಿತ ಮತ್ತು ಕಳೆದ 4 ವರ್ಷಗಳಲ್ಲಿ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರದ ಆಡಳೀತದಲ್ಲಿ ಗಮನಾರ್ಹ ಅಭಿವೃದ್ಧಿ ಆಗಿದೆ. ಡಬಲ್ ಎಂಜಿನ್ ಸರಕಾರವು ಇದಕ್ಕೆ ಕಾರಣ ಎಂದು ವಿವರಿಸಿದರು. ಮೂಲಸೌಕರ್ಯ ಅಭಿವೃದ್ಧಿ ಬಗ್ಗೆ ಗಮನ ಸೆಳೆದರು.
ಕರ್ನಾಟಕದಲ್ಲಿ ಜನಪರ ಸರಕಾರವಿದೆ. ಕೇಂದ್ರದಲ್ಲಿರುವ ನರೇಂದ್ರ ಮೋದಿಜಿ ಅವರ ನೇತೃತ್ವದ ಸರಕಾರವು ಇಲ್ಲಿನ ಅಭಿವೃದ್ಧಿಗೆ ಗರಿಷ್ಠ ಅನುದಾನವನ್ನು ನೀಡಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರಕಾರವು ಕೇಂದ್ರದ ವಿವಿಧ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನಕ್ಕೆ ತರುತ್ತಿದೆ. ಇದನ್ನು ಜನತೆ ಗಮನಿಸಬೇಕು ಎಂದು ಆಶಿಸಿದರು.
ಬಿಜೆಪಿಯದು ಅಭಿವೃದ್ಧಿಪರ ಡಬಲ್ ಎಂಜಿನ್ ಸರಕಾರವಾದರೆ, ಕಾಂಗ್ರೆಸ್ ಟ್ರಬಲ್ಡ್ ಎಂಜಿನ್ ಸರಕಾರ ಎಂದು ಅವರು ಟೀಕಿಸಿದರು. ಕಾಂಗ್ರೆಸ್ನಲ್ಲಿ ಅಧಿಕಾರಕ್ಕಾಗಿ ಹೋರಾಟ ನಡೆದಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಪಕ್ಷವು ಜನಹಿತವನ್ನು ಪರಿಗಣಿಸುವುದಿಲ್ಲ ಎಂದು ಟೀಕಿಸಿದರು. ಕಾಂಗ್ರೆಸ್ ಕುರ್ಚಿ ವ್ಯಾಮೋಹವನ್ನು ಹೊಂದಿದ ಪಕ್ಷ. ಕನ್ನಡಿಗರ ಹಿತವನ್ನು ಬಯಸುವುದಿಲ್ಲ ಎಂದು ಆರೋಪಿಸಿದರು.
ಕರ್ನಾಟಕಕ್ಕೆ ಮೊದಲ ಐಐಟಿಯನ್ನು ಮೋದಿಜಿ ನೀಡಿದ್ದಾರೆ. ಆದರೆ, ಕಾಂಗ್ರೆಸ್ ಅದರ ಕುರಿತು ಯೋಚಿಸಿಯೇ ಇರಲಿಲ್ಲ ಎಂದು ಆಕ್ಷೇಪಿಸಿದರು.
ಕರ್ನಾಟಕ ರಾಜ್ಯವು ಮೋದಿಜಿ ಅವರ ಮನಸ್ಸಿಗೆ ಆಪ್ತವಾದ ರಾಜ್ಯವಾಗಿದೆ. ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಹಲವು ಯೋಜನೆಗಳ ಶಿಲಾನ್ಯಾಸಕ್ಕಾಗಿ ಮೋದಿಜಿ 8 ಬಾರಿ ಇಲ್ಲಿಗೆ ಬಂದಿದ್ದಾರೆ. ಇದನ್ನು ಜನತೆ ಅರಿತಿದ್ದಾರೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ರಾಜ್ಯದ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ರಾಜ್ಯ ಶಿಸ್ತು ಸಮಿತಿಯ ಅಧ್ಯಕ್ಷ ಲಿಂಗರಾಜ್ ಪಾಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ, ಸದಸ್ಯ ಪ್ರಶಾಂತ್ ಕೆಡೆಂಜಿ ಮತ್ತಿತರರು ಉಪಸ್ಥಿತರಿದ್ದರು.