ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 18: ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಲೇ ಬೇಕು ಎಂದು ಹಠಕ್ಕೆ ಬಿದ್ದಿದ್ದ ಸಿದ್ದರಾಮಯ್ಯ ಕೊನೆಗೂ ಗೆದ್ದರಾಮಯ್ಯ ಆಗಿದ್ದಾರೆ. ಕಳೆದ ಐದು ದಿನಗಳಿಂದ ನವದೆಹಲಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆಆಗಿ ಡಿ.ಕೆ. ಶಿವಕುಮಾರ್ ಮತ್ತು ತಮ್ಮ ನಡುವೆ ನಡೆದ ಜಿದ್ದಾಜಿದ್ದಿಯಲ್ಲಿ ಕೊನೆಗೆ ಸಿದ್ದರಾಮಯ್ಯ ಅವರನ್ನು ಮೊದಲ ಅರ್ಧ ಅವಧಿಗೆ ಮುಖ್ಯಮಂತ್ರಿ ಮಾಡಲು ಎಐಸಿಸಿ ನಿರ್ಧಾರ ಮಾಡುವ ಮೂಲಕ ಸಿದ್ದರಾಮಯ್ಯ ಅವರ ಬೇಡಿಕೆಯನ್ನು ಈಡೇರಿಸಿದೆ.
ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪತನದ ಬಳಿಕ ಪ್ರತಿಪಕ್ಷದ ಸ್ಥಾನ ಅಲಂಕರಿಸಿದ ಸಿದ್ದರಾಮಯ್ಯ ಅಲ್ಲಿಂದ ಇಲ್ಲಿವರೆಗೆ ಭಾರತೀಯ ಜನತಾ ಪಕ್ಷದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆಕ್ರಮಣಕಾರಿಯಾಗಿ ಹೋರಾಡಿದ ಸಿದ್ದರಾಮಯ್ಯ ತಮಗೆ ಪ್ರಸ್ತುತ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ವರ್ಗದ ಸಮುದಾಯದವರು ಬೆಂಬಲ ನೀಡಿದ್ದು, ಅದಕ್ಕಾಗಿ ಬಹುಮತ ಬಂದಿದೆ. ಐದು ವರ್ಷದವರೆಗೆ ನನ್ನನ್ನೇ ಮುಖ್ಯಮಂತ್ರಿ ಮಾಡುವಂತೆ ಪಟ್ಟು ಹಿಡಿದಿದ್ದರು.
ಐದು ದಿನಗಳ ಕಾಲ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ಗಾಂಧಿ, ರಾಜ್ಯ ಉಸ್ತುವಾರಿ ಹಾಗೂ ಎಐಸಿಸಿ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಇನ್ನೋರ್ವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಲವು ಸುತ್ತಿನ ಮಾತುಕತೆ ಬಳಿಕ ಕೊನೆಗೆ ಮೊದಲ ಅರ್ಧ ಅವಧಿಗೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ವರಿಷ್ಠರು ಕಳೆದ ತಡ ರಾತ್ರಿ ನಿರ್ಧಾರ ತೆಗೆದುಕೊಂಡರು.
ಅತ್ತ ಮುಖ್ಯಮಂತ್ರಿ ನಾನೇ ಆಗಬೇಕು ಎಂದು ಹಠಕ್ಕೆ ಬಿದ್ದಿದ್ದ ಡಿ.ಕೆ. ಶಿವಕುಮಾರ್ ಒಂದು ಹಂತದಲ್ಲಿ ಮುಖ್ಯಮಂತ್ರಿ ಕೊಡದಿದ್ದರೆ ನಾನು ಶಾಸಕನಾಗಿಯೇ ಉಳಿಯುವೆ ಅಥವಾ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಹಲವು ಒತ್ತಡ ತಂತ್ರಗಳು ಅನುಸರಿಸಿದರೂ ಕೊನೆಗೆ ಸೋನಿಯಾಗಾಂಧಿ ಮಧ್ಯ ಪ್ರವೇಶದಿಂದಾಗಿ ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿಯಾಗಲು ಸಮಹತಿಸಿದ್ದಲ್ಲದೆ ನಂತರದ ಅರ್ಧ ಅವಧಿಗೆ ಮುಖ್ಯಮಂತ್ರಿ ಆಗಲು ವರಿಷ್ಠರ ಸಂಧಾನ ಸೂತ್ರಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ, ಇದು ಅಧಿಕೃತವಾಗಿಲ್ಲ. ಈ ಮಧ್ಯೆ ಇಂದು ಬೆಳಗ್ಗೆ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರನ್ನು ಮತ್ತು ಉಪಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬುಧವಾರ ತಡರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ನುಜನ ಖರ್ಗೆ ಸಮಕ್ಷಮ ಜರುಗಿದ ನಿರ್ಧಾರದ ಬಗ್ಗೆ ಮಾಹಿತಿ ನೀಡಿದರು.
ಆದರೆ, ಅಧಿಕಾರ ಹಂಚಿಕೆ ಮಾತ್ರ ಯಾವುದೇ ನಿಖರ ಮಾಹಿತಿ ದೊರೆತಿಲ್ಲವಾದರೂ ಮೊದಲ ಅರ್ಧ ಅವಧಿಗೆ ಸಿದ್ದರಾಮಯ್ಯ ಮತ್ತು ನಂತರದ ಅವಧಿಗೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ತೀರ್ಮಾನ ಮಾಡಲಾಗಿದೆ ಎಂದು ಬಲ್ಲ ಮೂಲಗಳಿಂದ ಗೊತ್ತಾಗಿದೆ. ಮಧ್ಯರಾತ್ರಿ ಸಂಧಾನ ಸಭೆಯಲ್ಲಿ ಒಪ್ಪಿಗೆಯಾದ ಬಳಿಕ ಇಂದು ಬೆಳಗ್ಗೆ ಕೆ.ಸಿ. ವೇಣುಗೋಪಾಲ್ ಅವರ ಮನೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಒಟ್ಟಾಗಿಯೇ ಸುರ್ಜೇವಾಲ ಅವರೊಂದಿಗೆ ಉಪಾಹಾರ ಸೇವಿಸಿದ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ತೆರಳಿದರು.
ಅಲ್ಲಿ ಅವರೊಂದಿಗೆ ಕೆಲ ಕಾಲ ಚರ್ಚಿಸಿದ ಬಳಿಕ ರಾಜ್ಯದಲ್ಲಿ ಒಟ್ಟಾಗಿ ಅಧಿಕಾರ ನಡೆಸುತ್ತೇವೆಂಬ ಸಂದೇಶ ಸಾರಲು ಖರ್ಗೆ ಅವರೊಂದಿಗೆ ಕೈಎತ್ತುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ.
ಈ ಎಲ್ಲಾ ರಾಜಕೀಯ ಬೆಳವಣಿಗೆ ಮಧ್ಯೆ ಕಳೆದ ಐದು ದಿನಗಳಿಂದ ಕಗ್ಗಂಟಾಗಿದ್ದ ಮುಖ್ಯಮಂತ್ರಿ ಆಯ್ಕೆ ಸುಖಾಂತ್ಯಗೊಂಡಿದ್ದು, ಬಳಿಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಒಂದೇ ವಿಶೇಷ ವಿಮಾನದಲ್ಲಿ ಆಗಮಿಸಿದರು. ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಜರುಗಿದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ, ಡಿ.ಕೆ. ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು.
ಸಂಭ್ರಮಾಚರಣೆ: ತಡರಾತ್ರಿ ನವದೆಹಲಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ, ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿ ಎಂದು ವಿಷಯ ಬಹಿರಂಗವಾಗುತ್ತಿದ್ದಂತೆಯೇ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಅವರವರ ಬೆಂಬಲಿಗರು ರಾತ್ರಿಯೇ ಪಠಾಕಿ ಸಿಡಿಸಿ, ಕ್ಷೀರಾಭಿಷೇಕ ಮಾಡಿ ಜಯಘೋಷಘಳನ್ನು ಮೊಳಗಿಸಿದರು. ಬೆಳಗ್ಗೆಯಿಂದಲೇ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಫ್ಲೆಕ್ಸ್, ಬ್ಯಾನರ್ಗಳು ರಾರಾಜಿಸಿದ್ದು, ಸಂಜೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಸಂಖ್ಯಾತ ಬೆಂಬಲಿಗರು ಅಲ್ಲಿಗೆ ತೆರಳಿ ಜಯಘೋಷಗಳನ್ನು ಹಾಕಿ ಅದ್ಧೂರಿ ಸ್ವಾಗತ ಮಾಡಿದರು. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ಸ್ವಾಗತಿಸಲು ಎಚ್ಎಲ್ಎಲ್ ವಿಮಾನ ನಿಲ್ದಾಣಕ್ಕೆ ಹಿರಿಯ ನಾಯಕರಾದ ಎಚ್.ಕೆ. ಪಾಟೀಲ್, ಕೆ.ಎಚ್. ಮುನಿಯಪ್ಪ, ಶಾಸಕರಾ ಅರ್ಷದ್ ರಿಜ್ವಾನ್, ಪ್ರದೀಪ್ ಈಶ್ವರ್ ಸೇರಿ ಹಲವು ನಾಯಕರು ಸ್ವಾಗತ ಕೋರಿದರು. ವ್ಯಾಪಕ ಸಿದ್ದತೆ: ಶನಿವಾರ ಮೇ 20ರಂದು ಮಧ್ಯಾಹ್ನ 12.30ಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ, ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ವ್ಯಾಪಕ ಸಿದ್ಧತೆ ನಡೆದಿವೆ. ಭದ್ರತೆ ಸೇರಿದಂತೆ ವೇದಿಕೆ ಕಾರ್ಯಕ್ರಮ ಎಲ್ಲಾ ಅಗತ್ಯ ಏರ್ಪಾಡು ಮಾಡಲಾಗಿದೆ.