ಸುದ್ದಿಮೂಲ ವಾರ್ತೆ
ಮೈಸೂರು,ಜೂ.27 : ಬಾಲಕಿ ಮೇಲೆ ಹಠಾತ್ತನೆ ಚಿರತೆಯೊಂದು ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಚಿಕ್ಕಮಾಲಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಗ್ಗಲಿಗುಂದಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಮನೆ ಮುಂದೆ ಕುಳಿತಿದ್ದಾಗ ಚಿರತೆ ದಾಳಿ ನಡೆಸಿದ್ದು, ಕಗ್ಗಲಿಗುಂದಿ ಗ್ರಾಮವು ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿದೆ. ಗಾಯಗೊಂಡಿರುವ ಬಾಲಕಿಯನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮದ ರಾಮು ಹಾಗೂ ಅವರ ಮಗಳು ಸುಶೀಲಾ ಮನೆಯ ಮುಂಭಾಗ ಕುಳಿತಿದ್ದರು. ಮನೆ ಬಳಿಗೆ ಬಂದ ಚಿರತೆಯು ರಾಮು ಮೇಲೆ ದಾಳಿ ಮಾಡಲು ಯತ್ನಿಸಿದೆ. ಅವರು ಜೋರಾಗಿ ಕಿರುಚಿದಾಗ, ಅವರನ್ನು ಬಿಟ್ಟು ಪಕ್ಕದಲ್ಲಿದ್ದ ಸುಶೀಲಾ ಮೇಲೆ ದಾಳಿ ಮಾಡಿ ಎಳೆದೊಯ್ಯಲು ಯತ್ನಿಸಿದೆ. ಮತ್ತೆ ರಾಮು ಅವರು ಜೋರಾಗಿ ಕಿರುಚಿಕೊಂಡಾಗ ಚಿರತೆ ಬಾಲಕಿಯನ್ನು ಬಿಟ್ಟು ಓಡಿದೆ.
ಬಾಲಕಿಯ ಬಾಯಿ ಹಾಗೂ ಗಂಟಲಿನ ಭಾಗದಲ್ಲಿ ಚಿರತೆ ಬಲವಾಗಿ ಕಚ್ಚಿದ್ದು, ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಆಕೆಯನ್ನು ಸಮೀಪದ ಹೋಲಿಕ್ರಾಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.