ಸುದ್ದಿಮೂಲ ವಾರ್ತೆ
ಹಾಸನ, ನ.10:ಇಲ್ಲಿನ ಐತಿಹಾಸಿಕ ಪ್ರಸಿದ್ಧ ಹಾಸನಾಂಬೆ ದೇವಿಯ ದರ್ಶನ ಪಡೆಯಲು ಧರ್ಮದರ್ಶನ ಸಾಲಿನಲ್ಲಿ ನಿಂತಿದ್ದ ಭಕ್ತರಿಗೆ ವಿದ್ಯುತ್ ಶಾಕ್ ತಗುಲಿ ಓರ್ವ ಬಾಲಕಿಗೆ ಗಂಭೀರ ಗಾಯಗಳಾಗಿ, 17 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿರುವ ದುರ್ಘಟನೆ ಶುಕ್ರವಾರ ನಡೆದಿದೆ.
ದೇವಾಲಯದ ಬಲಭಾಗದಲ್ಲಿ ಇರುವ ಸಂತೆಪೇಟೆ ಭಾಗದಿಂದ ಧರ್ಮದರ್ಶನಕ್ಕೆ ನಿಂತಿದ್ದ ಭಕ್ತರಿಗೆ ಮಧ್ಯಾಹ್ನ 12.22 ರ ಹೊತ್ತಿನಲ್ಲಿ ಕಬ್ಬಿಣದ ಬ್ಯಾರಿಕೇಡ್ ನಲ್ಲಿ ಕರೆಂಟ್ ಪಾಸ್ ಆಗಿ ಕುಸಿದು ಬಿದ್ದಿದ್ದಾರೆ. ಇದರಿಂದಾಗಿ ಆತಂಕಕೊಂಡ ಮಹಿಳೆಯರು ಪ್ರಾಣ ಉಳಿಸಿಕೊಳ್ಳಲು ಬ್ಯಾರಿಕೇಡ್ ಮುರಿದಿದ್ದಾರೆ. ಒಮ್ಮೆಲೆ ಸರತಿ ಸಾಲಿನಿಂದ ಅಡ್ಡಾದಿಡ್ಡಿಯಾಗಿ ಓಡಿದ್ದಾರೆ. ಈ ವೇಳೆ ಕೆಳಗೆ ಬಿದ್ದವರನ್ನು ಸ್ಥಳೀಯರು ಹೊರಗೆಳೆದಿದ್ದಾರೆ. ಕೆಳಗೆ ಬಿದ್ದುಮತ್ತು ಕಾಲ್ತುಳಿತಕ್ಕೆ ಸಿಕ್ಕಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಸ್ಥಳದಲ್ಲಿ ಗೊಂದಲದ ಪರಿಸ್ಥಿತಿ ಉಂಟಾಗಿ ನೂಕು ನುಗ್ಗಲು ಸಂಭವಿಸಿ, ಗಾಬರಿಯಿಂದ ಒಬ್ಬರ ಮೇಲೆ ಒಬ್ಬರು ಬಿದ್ದು, ಕಾಲ್ತುಳಿತ ಉಂಟಾಯಿತು.
ಜಿಲ್ಲಾಡಳಿತ ವಿರುದ್ಧ ಭಕ್ತರ ಆಕ್ರೋಶ
ಲಕ್ಷಾಂತರ ಭಕ್ತರು ಹಾಸನಾಂಬೆಯ ದರ್ಶನಕ್ಕೆ ಬರುವ ನಿರೀಕ್ಷೆ ಇದ್ದರೂ, ಜಿಲ್ಲಾಡಳಿ ಸೂಕ್ತ ವ್ಯವಸ್ಥೆಯನ್ನು ಮಾಡಿಲ್ಲ. ದೇವಸ್ಥಾನದ ಸಿಬ್ಬಂದಿ, ಆಡಳಿತ ಮಂಡಳಿ ಸ್ಪಂದಿಸಿಲ್ಲ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಣಾಪಾಯ ಆಗಿಲ್ಲ
ಕರೆಂಟ್ ಶಾಕ್ ಆಗಿರುವ ಸುದ್ದಿ ಹರಡುತ್ತಿರುವಂತೆ ಅಲ್ಲಿ ಗೊಂದಲ ಉಂಟಾಯಿತು. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಇಬಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕರೆಂಟ್ ಶಾಕ್ಗೆ ಏನು ಕಾರಣ ಎಂಬುದನ್ನು ಪರಿಶೀಲಿಸಲಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯ ಆಗಿಲ್ಲ. ಸಣ್ಣಪುಟ್ಟ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಂಜೆ ವೇಳೆ ಇನ್ನಷ್ಟು ಭಕ್ತರ ಆಗಮನ ಇರುವ ಕಾರಣ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಂ. ಸುಜಿತಾ ತಿಳಿಸಿದ್ಧಾರೆ.
ಕೂಡಲೇ ವಿದ್ಯುತ್ ಕಂಬದಿಂದ ವಿದ್ಯುತ್ ಸಂಪರ್ಕವನ್ನು ತೆಗೆಯದಿದ್ದರೇ ಭಾರಿ ಅನಾಹುತವೇ ಸಂಭವಿಸುತ್ತಿತ್ತು. ಸುದ್ದಿ ತಿಳಿದ ಅಲ್ಲೇ ಇದ್ದ ಚೆಸ್ಕಾಂ ನವರು ಸಂಪರ್ಕ ತೆಗೆದು ಸಮಯ ಪ್ರಜ್ಷೆ ಮೆರೆದಿದ್ದಾರೆ.
ದಿನೇಶ್ ಗುಂಡೂರಾವ್ ಭೇಟಿ
ಹಾಸನಾಂಬೆ ದರ್ಶಕ್ಕೆ ಆಗಮಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಹಾಸನ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.
ಈ ವೇಳೆ ಮಾತನಾಡಿದ ಸಚಿವರು, ಹಾಸನಾಂಬೆ ದರ್ಶನದ ವೇಳೆ ಕರೆಂಟ್ ಶಾಕ್ ಹೊಡೆದಿದ್ದು ಸ್ಪಷ್ಟವಾಗಿದೆ. ಇದೇ ವೇಳೆ ನೂಕಾಟ ತಳ್ಳಾಟದ ವೇಳೆ ಹಲವರಿಗೆ ಗಾಯಗಳಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಆರೋಗ್ಯವಾಗಿದ್ದು, ಕರೆಂಟ್ ಶಾಕ್ ನಿಂದ ಓರ್ವ ಯುವತಿ ಅಸ್ವಸ್ಥಗೊಂಡಿದ್ದಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದರು.