ಸುದ್ದಿಮೂಲ ವಾರ್ತೆ
ಮೈಸೂರು, ಜೂ.14: ಜಿಲ್ಲೆಯ ಹುಣಸೂರು ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಮಾರುತಿ ಬಡಾವಣೆ ಮತ್ತು ಮಂಜುನಾಥ ಬಡಾವಣೆಗಳಲ್ಲಿ ರಾತ್ರಿ ಕಳವು ಮಾಡುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 18 ಲಕ್ಷ ರೂ. ಮೌಲ್ಯದ 289 ಗ್ರಾಂ ಚಿನ್ನಾಭರಣ ಬೆಳ್ಳಿ ಪದಾರ್ಥಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಮೇ ತಿಂಗಳಲ್ಲಿ ನಾಲ್ಕು ಪ್ರಕರಣಗಳು ವರದಿಯಾಗಿದ್ದವು. ಈ ಪ್ರಕರಣಗಳನ್ನು ಪತ್ತೆ ಹಚ್ಚಲು ಹೆಚ್ಚುವರಿ ಎಸ್ಪಿ , ಡಾ.ನಂದಿನಿ ಮಾರ್ಗದರ್ಶನದಲ್ಲಿ ಹುಣಸೂರು ಉಪವಿಭಾಗದ ಇನ್ಸ್ಟೆಕ್ಟರ್ ಎಸ್.ಎಂ ದೇವೇಂದ್ರ ಹಾಗೂ ಹುಣಸೂರು ಟೌನ್ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು.
ಈ ತಂಡ, 3 ಜನ ಆರೋಪಿಗಳನ್ನು ವಶಕ್ಕೆ ಪಡೆದು ಹುಣಸೂರು ಪಟ್ಟಣ ಪೊಲೀಸ್ ಠಾಣೆಯ 15 ಪ್ರಕರಣ, ಪಿರಿಯಾಪಟ್ಟಣ ಪೊಲೀಸ್ ಠಾಣೆಯ 1 ಪ್ರಕರಣ ಹಾಗೂ ಕೆ.ಆರ್.ನಗರ ಪೊಲೀಸ್ ಠಾಣೆಯ 1 ಪ್ರಕರಣ, ಮೈಸೂರು ಜಿಲ್ಲೆಯಲ್ಲಿ ವರದಿಯಾಗಿದ್ದ ಒಟ್ಟು 7 ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ಪತ್ತೆ ಮಾಡಿದೆ.
ಆರೋಪಿಗಳಿಂದ 18 ಲಕ್ಷ ಮೌಲ್ಯದ 289 ಗ್ರಾಂ ಚಿನ್ನಾಭರಣ, 2.4 ಕೆ.ಜಿ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ .ಆರೋಪಿಗಳು ಈ ಹಿಂದೆ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸಿದ್ದಾರೆ ಎಂದು ತಿಳಿಸಿದರು.
ಮಾಲೀಕರ ಗಮನ ಸೆಳಡದು 1.30 ಲಕ್ಷ ರೂ. ಕಳವು
ಮಾಲೀಕರ ಗಮನ ಬೇರೆಡೆ ಸೆಳೆದು ಗಲ್ಲಾ ಪೆಟ್ಟಿಗೆಯಲ್ಲಿದ್ದ 1.30 ಲಕ್ಷ ನಗದು ದೋಚಿ ಪರಾರಿಯಾದ ಘಟನೆ ಮೈಸೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಡೆದಿದೆ.
ಮೂವರು ಕಳ್ಳರಿಂದ ಕೃತ್ಯ ನಡೆದಿದೆ. ಕಮೀಷನ್ ಏಜೆಂಟ್ ಆಗಿರುವ ಅಯಾಜ್ ಎಂಬುವರಿಗೆ ಸೇರಿದ ಮಳಿಗೆ 72 ರಲ್ಲಿ ಘಟನೆ ನಡೆದಿದೆ. ಹೋಲ್ ಸೇಲ್ ದರದಲ್ಲಿ ಹಣ್ಣು ಖರೀದಿಸುವ ಸೋಗಿನಲ್ಲಿ ಬಂದ ಖದೀಮರು ಮಾಲೀಕರ ಗಮನವನ್ನು ಬೇರೆಡೆ ಸೆಳೆದು ಹಣ ಲಪಟಾಯಿಸಿದ್ದಾರೆ. ಮಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.