ಮೈಸೂರು, ಆ.21:ಸಾಂಸ್ಕೃತಿಕ ನೆಲೆಗಟ್ಟಿಗಾಗಿ, ಸಮಾನತೆಯ ಮತ್ತು ಜನಪರಂಪರೆಯ ಸಮಾಜ ನಿರ್ಮಾಣಕ್ಕಾಗಿ ಸಾಂಸ್ಕ್ರತಿಕ ಮಾಧ್ಯಮವಾಗಿ ಕೆಲಸ ಮಾಡುತ್ತಿರುವ ನಗರದ ನಿರಂತರ ಪೌಂಡೇಶ್ನಿಂದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕಥೆಗಳನ್ನಾಧರಿಸಿ ʻಗೊರೂರುʼ ನಾಟಕ ಆ.24 ಮತ್ತು 25 ರಂದು ರಂಗಾಯಣದಲ್ಲಿ ಪ್ರದರ್ಶನಗೊಳ್ಳಲಿದೆ.
ಗೊರೂರು ನಾಟಕದ ಪೋಸ್ಟರ್ ಅನ್ನು ಸೋಮವಾರ ಬಿಡುಗಡೆ ಮಾಡಲಾಯಿತು. ನಿರ್ದೇಶಕ ಖ್ಯಾತ ರಂಗಕರ್ಮಿ ಮಂಜುನಾಥ್ ಎಲ್ ಬಡಿಗೇರ್, ಕಲಾವಿದರಾದ ಸುಗುಣ, ಶ್ರೀನಿವಾಸ್, ಆಕಾಶ್, ಪತ್ರಕರ್ತರಾದ ಕೃಷ್ಣ, ದಯಾಶಂಕರ ಮೈಲಿ ಉಪಸ್ಥಿತರಿದ್ದರು.
ಗೊರೂರು ಕುರಿತು: ಸಾಹಿತ್ಯ ರಚನೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರರು ಕನ್ನಡ ಸಾಹಿತ್ಯದಲ್ಲಿ ಹಲವು ಮುಖ್ಯ ಕೃತಿಗಳನ್ನು ನೀಡಿದ್ದಾರೆ. ಹಳ್ಳಿಯ ಚಿತ್ರಗಳು, ನಮ್ಮ ಊರಿನ ರಸಿಕರು ಪುಸ್ತಕಗಳಿಂದ ತಮ್ಮ ಬರವಣಿಗೆಯನ್ನು ಆರಂಭಿಸಿದ ಗೊರೂರರು ನಂತರ ಹಲವು ಪ್ರಸಿದ್ಧ ಪುಸ್ತಕಗಳನ್ನು ರಚಿಸಿದ್ದಾರೆ. ಅವರ “ಬೂತಯ್ಯನ ಮಗ ಅಯ್ಯು” ಹಾಗೂ “ಹೇಮಾವತಿ” ಹಾಗೂ “ಊರ್ವಶಿ” ಕಥನಗಳು ಕನ್ನಡದ ಮಹತ್ವದ ಚಲನಚಿತ್ರಗಳಾಗಿ ಮೂಡಿಬಂದಿವೆ.