ಸುದ್ದಿಮೂಲ ವಾರ್ತೆ
ಹೊಸಕೋಟೆ ,ಅ.21 : ಕಟ್ಟಡ ಕಾರ್ಮಿಕರ ಅಭಿವೃದ್ಧಿದೃಷ್ಟಿಯಿಂದ ಜೈ ಮಾರುತಿ ಕಟ್ಟಡ ಕಾರ್ಮಿಕರ ಸಂಘಟನೆ ಪ್ರಾರಂಭ ಮಾಡಿ ಸರ್ಕಾರದಿಂದ ಬರುವ ಸವಲತ್ತುಗಳನ್ನು ಪ್ರಾಮಾಣಿಕವಾಗಿ ಅವರಿಗೆ ತಲುಪಿಸುವ ಕಾರ್ಯವನ್ನು ಮಾಡಿದ್ದೇನೆ ಹೊರತು ಯಾವುದೇ ರೀತಿಯ ಹಣವನ್ನು ಸಂಘದ ಸದಸ್ಯರಿಂದ ವಸೂಲಿ ಮಾಡಿಲ್ಲ ಎಂದು ಜೈ ಮಾರುತಿ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಗೊಟ್ಟಿಪುರ ಚಂದ್ರು ತಿಳಿಸಿದರು.
ಜೈ ಮಾರುತಿ ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷರಾಗಿದ್ದ ವೆಂಕಟೇಶ್, ಸಂಘದ ರಾಜ್ಯಾಧ್ಯಕ್ಷ ಚಂದ್ರು ಅವರು ಸಂಘದ ಹಣವನ್ನು ದುರ್ಬಳಕೆ ಮಾಡಿದ್ದಾರೆ ಎಂದು ಆರೋಪ ಮಾಡಿದ ಹಿನ್ನೆಲೆಯಲ್ಲಿ ಹೊಸಕೋಟೆ ಸಂಘದ ಕಚೇರಿ ಆವಣದಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟೀಕರಣವನ್ನು ನೀಡಿದರು.
ನಮ್ಮ ಸಂಘದಲ್ಲಿ ಉಪಾಧ್ಯಕ್ಷರಾಗಿದ್ದ ವೆಂಕಟೇಶ್ ನನ್ನ ಮೇಲೆ ಆರೋಪವನ್ನ ಮಾಡಿದ್ದಾರೆ. ಆದರೆ ಅವರ ಆರೋಪಕ್ಕೆ ಉತ್ತರ ಕೊಡುವ ಅಗತ್ಯತೆ ನನಗಿಲ್ಲ. ಬದಲಾಗಿ ನಮ್ಮ ಸಂಘದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಉತ್ತರ ಕೊಡುವ ಅವಶ್ಯಕತೆ ಇದೆ. ಆದ್ದರಿಂದ ನಾನು ಸಂಘದ ಯಾವುದೇ ರೀತಿಯ ಹಣವನ್ನು ಕಬಳಿಕೆ ಮಾಡಿಲ್ಲ ಬದಲಾಗಿ ಸಂಘ ಸ್ಥಾಪನೆ ಮಾಡಿ ಕಾರ್ಮಿಕರ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿದ್ದೇನೆ. ನಾನು ಕಾರ್ಮಿಕರಿಗೆ ಮಾಡಿರುವ ಮಾಡಿರುವ ಅಭಿವೃದ್ಧಿ ಕಾರ್ಯಗಳು ಸಂಘದ ಸದಸ್ಯರಿಗೆ ಗೊತ್ತಿದೆ ಎಂದು ಸ್ಪಷ್ಟನೆ ನೀಡಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಶಿವನಾಪುರ ಅಮ್ಜದ್, ಕಟ್ಟಡ ಕಾರ್ಮಿಕರ ಸಂಘದ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಗೌಸ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮುಜಾಸಿಮ್, ಖಜಾಂಚಿ ದಯಾನಂದ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಂದ್ರ ಸಿಂಗ್, ರಾಜ್ಯ ಸಂಚಾಲಕ ಹನುಮಂತ ಸೇರಿದಂತೆ ನೂರಾರು ಕಟ್ಟಡ ಕಾರ್ಮಿಕರು ಹಾಜರಿದ್ದರು.