ಸುದ್ದಿಮೂಲ ವಾರ್ತೆ
ತುಮಕೂರು, ಅ.10 : ಜಿಲ್ಲೆಯಲ್ಲಿ ಅ. 27, 28 ಮತ್ತು 29 ರಂದು ಮೂರು ದಿನಗಳ ಕಾಲ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದ್ದು, ತುಮಕೂರು ಕ್ರೀಡಾಕೂಟ ಅವಿಸ್ಮರಣೀಯ ನೆನಪಾಗಿಸುವ ನಿಟ್ಟಿನಲ್ಲಿ ಸುವ್ಯವಸ್ಥಿತವಾಗಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸಂಯುಕ್ತಾಶ್ರಯದಲ್ಲಿ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು
ಕ್ರೀಡಾಕೂಟದಲ್ಲಿ ರಾಜ್ಯದಿಂದ 3500 ಮಹಿಳಾ ಕ್ರೀಡಾಪಟುಗಳು ಸೇರಿದಂತೆ 9952 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಕ್ರೀಡಾಕೂಟ ನಡೆಯುವ ಸಮಯದಲ್ಲಿ ಯಾವುದೇ ಗೊಂದಲಗಳು ಉಂಟಾಗದ ರೀತಿಯಲ್ಲಿ ವ್ಯವಸ್ಥಿತವಾಗಿ ನೋಡಿಕೊಳ್ಳಬೇಕು.
ಭಾಗವಹಿಸುವವರಅನುಕೂಲಕ್ಕಾಗಿ ಮಾಹಿತಿ ಸಹಾಯವಾಣಿಯನ್ನು ಸ್ಥಾಪಿಸಬೇಕು,ಪ್ರತಿಯೊಬ್ಬರಿಗೂ ಉಳಿದುಕೊಳ್ಳಲು ಬೇಕಾಗುವ ಉತ್ತಮ ವಸತಿ ಸೌಕರ್ಯ, ಸಾರಿಗೆ, ಊಟದ ವ್ಯವಸ್ಥೆಗಳನ್ನು ಮಾಡಿಕೊಡಬೇಕು ಹಾಗೂ ಅವರ ವಸತಿ ಸ್ಥಳದಿಂದ ಕ್ರೀಡಾಂಗಣಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ವಿವಿಧ ಶಾಲಾ- ಕಾಲೇಜು, ವಿಶ್ವವಿದ್ಯಾನಿಲಯದ ಸೇರಿದ 17 ಆವರಣಗಳಲ್ಲಿ ಒಟ್ಟು 21 ವಿವಿಧ ಕ್ರೀಡೆಗಳನ್ನು ಏರ್ಪಡಿಸಲು ಸ್ಥಳಗಳನ್ನು ನಿಗಧಿ ಮಾಡಲಾಗಿದ್ದು, ಕ್ರೀಡಾ ಪಟುಗಳಿಗೆ ಸಕಲ ಸೌಲಭ್ಯ ಕಲ್ಪಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸೂಚಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಎನ್.ನರಸಿಂಹರಾಜು ಮಾತನಾಡಿ, ಮೂರು ದಿನಗಳ ಕಾಲ ನಡೆಯಲಿರುವ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ 53 ಇವೆಂಟ್ಸ್ ಗಳನ್ನು ನಡೆಸಲಾಗುತ್ತದೆ. ಕಾರ್ಯಕ್ರಮ ಯಶಸ್ವಿಗೊಳಿಸಲು 8ಸಮಿತಿಗಳನ್ನು ರಚಿಸಲಾಗಿದೆ.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲಾ ಕ್ರೀಡಾಪಟುಗಳಿಗೂ ಕ್ಯಾಪ್,ಟ್ರ್ಯಾಕ್ ಸೂಟ್ ಸೇರಿದಂತೆ ಎಲ್ಲಾ ಸವಲತ್ತುಗಳನ್ನು ನೀಡಲಾಗುವುದು. ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ್ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಹಾಕಿ, ಕುಸ್ತಿ, ಕಬಡ್ಡಿ, ವಾಲಿಬಾಲ್, ಬಾಸ್ಕೆಟ್ಬಾಲ್, ಅಥ್ಲೆಟಿಕ್ಸ್, ಟೆನ್ನಿಕಾಯ್ಟ್, ವೇಟ್ ಲಿಫ್ಟಿಂಗ್, ಬೆಸ್ಟ್ ಫಿಸಿಕ್, ಚೆಸ್, ಬಾಲ್ ಬ್ಯಾಡ್ಮಿಂಟನ್, ಥ್ರೋಬಾಲ್, ಈಜು, ಕೇರಂ, ಫುಟ್ಬಾಲ್, ಶಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಟೇಬಲ್ ಟೆನ್ನಿಸ್ ಒಳಗೊಂಡ ಕ್ರೀಡಾಕೂಟಗಳು ನಡೆಯಲಿವೆ.
ಸಂಗೀತ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಾದ ಶಾಸ್ತ್ರೀಯ ಗಾಯನ, ಹಿಂದೂಸ್ಥಾನಿ, ಕರ್ನಾಟಕ ಮತ್ತು ಲಘು ಸಂಗೀತ, ಭರತನಾಟ್ಯ, ಕಥಕ್, ಮಣಿಪುರಿ, ಕೂಚಿಪುಡಿ, ಒಡಿಸ್ಸಿ ಮತ್ತು ಇತರ ಶಾಸ್ತ್ರೀಯ
ನೃತ್ಯಗಳು, ಶಾಸ್ತ್ರೀಯ ವಾದ್ಯ ಸಂಗೀತ, ಜಾನಪದ ಹಾಡುಗಳು ಮತ್ತು ನೃತ್ಯಗಳು, ಕರಕುಶಲ ಪ್ರದರ್ಶನ ಮತ್ತು ಸ್ಕಿಟ್ಗಳು ನಡೆಯಲಿವೆ. ಜಿಲ್ಲಾ ಮಟ್ಟದಲ್ಲಿ ಅರ್ಹತೆ ಪಡೆದವರು ಮಾತ್ರ ಈ ರಾಜ್ಯ ಮಟ್ಟದ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.