ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ, ಜು.15: ಹೆಚ್.ಎನ್.ವ್ಯಾಲಿ ಮತ್ತು ಕೆ.ಸಿ. ವ್ಯಾಲಿ ನೀರಾವರಿ ಯೋಜನೆಯಡಿಯ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಹಿನ್ನೆಲೆಯಲ್ಲಿ ಶನಿವಾರ ಕಂದವಾರ ಕೆರೆಯ ಪಂಪ್ ಹೌಸ್ ಸೇರಿದಂತೆ ಸುತ್ತಮುತ್ತಲ ಪ್ರದೇಶವನ್ನು ಇಂದು ಪರಿವೀಕ್ಷಣೆ ಮಾಡಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು.
ಅವರು ಶನಿವಾರ ಚಿಕ್ಕಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ಕಂದವಾರ ಕೆರೆಯ ಪಂಪ್ ಹೌಸ್ ಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು.
ಹೆಚ್.ಎನ್.ವ್ಯಾಲಿ ಮತ್ತು ಕೆ.ಸಿ. ವ್ಯಾಲಿ ನೀರಾವರಿ ಯೋಜನೆಯಿಂದ ರೈತರಿಗೆ ಸಾಕಷ್ಟು ಲಾಭ ಆಗಿದೆ. ನಾನು ಭೇಟಿ ನೀಡಿದ ಸ್ಥಳಗಳಲ್ಲಿ ರೈತರು ಸ್ವ ಇಚ್ಚೆಯಿಂದ ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಅಂತರ್ಜಲ ಮಟ್ಟ ವೃದ್ಧಿಸಿದೆ. ಇದರಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಇಳುವರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಈ ಯೋಜನೆಯಡಿ ವೃದ್ಧಿಸಿರುವ ಅಂತರ್ಜಲದಿಂದ ಕೃಷಿ ಕೈಗೊಳ್ಳಬಹುದು. ಆದರೆ ಕುಡಿಯುವ ನೀರಿನ ಉದ್ದೇಶಕ್ಕೆ ಹಾಗೂ ಕೃಷಿ ಚಟುವಟಿಕೆಗೆ ಈ ನೀರನ್ನು ನೇರವಾಗಿ ಬಳಸಬಾರದು. ಇಂತಹ ಮಹತ್ವಾಕಾಂಕ್ಷಿ ಯೋಜನೆಯ ನೀರು ಶುದ್ಧಿಕರಣ ಘಟಕಗಳಿಗೆ, ನೀರು ವಿತರಣಾ ಕೇಂದ್ರಗಳಿಗೆ ಪಂಪ್ ಹೌಸ್ಗಳಿಗೆ ಹಾಗೂ ಕೆರೆಗಳ ಸುತ್ತಮುತ್ತಲ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಸಮರ್ಪಕವಾಗಿ ಯೋಜನೆಯ ಲಾಭವನ್ನು ರೈತರಿಗೆ ತಲುಪಿಸಲು ಯೋಜಿಸಿದ್ದೇನೆ ಎಂದು ತಿಳಿಸಿದರು.
ಈ ಯೋಜನೆಯಡಿ ಬರುವ ಕೆರೆಗಳ ಒತ್ತುವರಿ ತೆರವಿಗೆ, ಕೆರೆಗಳ ಸಂರಕ್ಷಣೆಗೆ, ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ. 210 ಎಂಎಲ್ಡಿ ನೀರು ನಮಗೆ ಹೆಚ್.ಎನ್.ವ್ಯಾಲಿಯಿಂದ ನೀರು ದೊರಕಬೇಕಿತ್ತು. 60 ಎಂಎಲ್ಡಿ ನೀರಿನ ಕೊರತೆಯಿಂದಾಗಿ ಕಡಿಮೆ ನೀರು ಲಭ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ಜಲಮಂಡಳಿಯವರೊಂದಿಗೆ ಚರ್ಚಿಸಿ ಪೂರ್ಣ ಪ್ರಮಾಣದ ನೀರು ಪಡೆಯಲಾಗುವುದು, ಗುರ್ತಿಸಿರುವ ಪ್ರತಿಯೊಂದು ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಮಾಡಲಾಗುವುದು ಎಂದರು.
ಕೆರೆಯಿಂದ ಕೆರೆಗೆ ಸಂಪರ್ಕ ಮಾಡುವ ರಾಜ ಕಾಲುವೆಗಳನ್ನು ಅಭಿವೃದ್ಧಿ ಪಡಿಸಲಾಗುವುದು, ಸ್ಥಳೀಯವಾಗಿ ಕೆರೆಗೆ ಸೇರುವ ಕೊಳಚೆ ನೀರನ್ನು ತಡೆಯಲು ಈಗಾಗಲೇ ಸೂಚನೆ ನೀಡಿದ್ದೇನೆ. ಜೊತೆಗೆ ಈ ಯೋಜನೆಯಡಿಯ ನೀರನ್ನು 3ನೇ ಹಂತದಲ್ಲಿ ಶುದ್ಧೀಕರಿಸಿ ವಿತರಿಸುವ ವಿಚಾರ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಪರಿಶೀಲಿಸಿ 3ನೇ ಹಂತದ ಶುದ್ಧಿಕರಣಕ್ಕೆ ಕ್ರಮವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಸಣ್ಣ ನೀರಾವರಿ ಇಲಾಖೆಯ ಅಭಿಯಂತರರಾದ ರಾಘವನ್, ತಹಶೀಲ್ದಾರ್ ಗಣಪತಿ ಶಾಸ್ರ್ತಿ, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು. ಕಂದವಾರ ಕೆರೆ ಪಂಪ್ ಹೌಸ್ ವೀಕ್ಷಣೆಗೂ ಮುನ್ನ ಸಚಿವರು ಮುದ್ದೇನಹಳ್ಳಿ ಬಳಿ ಇರುವ ವಿತರಣಾ ತೊಟ್ಟಿ (ಡಿ.ಸಿ. ಪಾಯಿಂಟ್) ಗೆ ಭೇಟಿ ಪರಿಶೀಲಿಸಿದರು.