ಸುದ್ದಿಮೂಲ ವಾರ್ತೆ
ಬೆಂಗಳೂರು, ಜು 5 : ದುರ್ಬಲ ಜೀವಕೋಶಗಳು ಮತ್ತು ಕಡಿಮೆ ರೋಗನಿರೋಧಕ ಶಕ್ತಿ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗಬಹುದು. ನಿಯಮಿತವಾಗಿ ಯೋಗ ಮತ್ತು ವ್ಯಾಯಾಮ ಮಾಡುವುದರಿಂದ ಜೀವಕೋಶಗಳು ಆರೋಗ್ಯಕರವಾಗಿರುತ್ತವೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಪರಿಣಾಮದಿಂದ ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳನ್ನು ತಪ್ಪಿಸಬಹುದು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಕರ್ನಾಟಕ ರಾಜ್ಯ ಶಾಖೆ, ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿ ಬೆಂಗಳೂರು ಸಹಯೋಗದಲ್ಲಿ ರಾಜಭವನದಲ್ಲಿ ಆಯೋಜಿಸಲಾಗಿದ್ದ ರಾಜಭವನದ ಸಿಬ್ಬಂದಿಗಾಗಿ “ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣೆ ಕಾರ್ಯಕ್ರಮ”ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ಯಾನ್ಸರ್ ದೇಹದಲ್ಲಿ ಸಂಭವಿಸುವ ಅಸಹಜ ಮತ್ತು ಅಪಾಯಕಾರಿ ಸ್ಥಿತಿಯಾಗಿದೆ. ದೇಹದಲ್ಲಿನ ಜೀವಕೋಶಗಳು ಅಸಹಜವಾಗಿ ಬೆಳೆಯಲು ಮತ್ತು ವಿಭಜಿಸಲು ಪ್ರಾರಂಭಿಸಿದಾಗ ಕ್ಯಾನ್ಸರ್ ಸಂಭವಿಸುತ್ತದೆ. ವಿವಿಧ ರೀತಿಯ ಕ್ಯಾನ್ಸರ್ ನ ಲಕ್ಷಣಗಳು ಪರಸ್ಪರ ಭಿನ್ನವಾಗಿರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬರೂ ಅದರ ಚಿಹ್ನೆಗಳು ಮತ್ತು ರೋಗಲಕ್ಷಣಗಳ ಬಗ್ಗೆ ತಿಳಿದಿರಬೇಕು, ಆದ್ದರಿಂದ ಸಮಯಕ್ಕೆ ರೋಗಲಕ್ಷಣಗಳನ್ನು ಗುರುತಿಸುವ ಮೂಲಕ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಪ್ರಾರಂಭಿಸಬಹುದಾಗಿದೆ ಎಂದು ಹೇಳಿದರು.
ಕರ್ನಾಟಕ ರೆಡ್ ಕ್ರಾಸ್ ಸೊಸೈಟಿಯು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕ್ಯಾನ್ಸರ್ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಲು ಕೆಲಸ ಮಾಡುತ್ತಿದೆ. ಕಿದ್ವಾಯಿ ಸ್ಮಾರಕ ಸಂಸ್ಥೆಯ ನಿರ್ದೇಶಕರು ಮತ್ತು ಅವರ ತಂಡವು ಮಾನವೀಯ ಸೇವೆ ಮತ್ತು ದೈವಿಕ ಸೇವೆ ಮಾಡುತ್ತಿದ್ದಾರೆ. ಮಾನವೀಯತೆಗೆ ಸೇವೆ ಸಲ್ಲಿಸುವ ಎರಡೂ ಸಂಸ್ಥೆಗಳ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದ ರಾಜ್ಯಪಾಲರು, ರಾಜಭವನದ ಅಧಿಕಾರಿ, ಸಿಬ್ಬಂದಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.
ಕಿದ್ವಾಯಿ ಸಂಸ್ಥೆಯ ನಿರ್ದೇಶಕರಾದ ಲೋಕೇಶ್ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸ್ಕ್ರೀನಿಂಗ್ ಮಾಡಿಸುವ ಮೂಲಕ ಪ್ರಾರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ಹಚ್ಚಿ ಚಿಕಿತ್ಸೆ ನೀಡಬಹುದಾಗಿದೆ. ಪ್ರತಿನಿತ್ಯ 1 ಗಂಟೆಗಳ ಕಾಲ ವ್ಯಾಯಾಮ, ಮಿಶ್ರ ಹಣ್ಣುಗಳ ಸೇವೆ ಮಾಡುವುದು ಹಾಗೂ ಜಂಕ್ ಫುಡ್ ಸೇವನೆ ಕಡಿತಗೊಳಿಸಿರುವುದರಿಂದ ಇದನ್ನು ನಿಯಂತ್ರಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಭಾರತೀಯ ರೆಡ್ ಕ್ರಾಸ್ ಸoಸ್ಥೆ ರಾಜ್ಯಾಧ್ಯಕ್ಷರಾದ ವಿಜಯ್ ಕುಮಾರ್ ಪಾಟೀಲ್, ರೆಡ್ ಕ್ರಾಸ್ ರಾಜ್ಯ ಶಾಖೆಯ ಉಪಾಧ್ಯಕ್ಷರಾದ ಆನಂದ ಎಸ್.ಜಿಗಜಿನ್ನಿ, ಡಾ.ವಿ.ಲೋಕೇಶ್, ನಿರ್ದೇಶಕರ ಮುಂತಾದವರು ಉಪಸ್ಥಿತರಿದ್ದರು.