ಸುದ್ದಿಮೂಲವಾರ್ತೆ
ಕೊಪ್ಪಳ ಆ 16: ಐಎಎಸ್ ಅಧಿಕಾರಿಗಳೆಂದರೆ ಸೂಟು, ಬೂಟು ಹಾಕಿಕೊಂಡು ಕಾರಿನಲ್ಲಿ ಜುಮ್ಮಂತ ತಿರುಗಾಡುವವರು ಎಂಬುವುದು ಸಾಮಾನ್ಯವಾದ ಮಾತು. ಆದರೆ ಇಲ್ಲೊಬ್ಬ ಐಎಎಸ್ ಅಧಿಕಾರಿ ಲುಂಗಿ ತೊಟ್ಟು, ತಲೆಗೆ ಟವೆಲ್ ಸುತ್ತಿ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ದೇಸಿಯ ತೊಡುಗೆಯಲ್ಲಿ ಆಕರ್ಷಿಸಿದ್ದಾರೆ.
ಅಧಿಕಾರಿಗಳೆಂದರೆ ಅದರಲ್ಲೂ ಜಿಲ್ಲಾ ಮಟ್ಟದ ಅಧಿಕಾರಿಗಳೆಂದರೆ ಸದಾ ಕಾರ್ಯದ ಒತ್ತಡ, ಸರ್ಕಾರಿ ಆದೇಶಗಳ ಪಾಲನೆ, ವಿವಿಧ ಇಲಾಖೆಗಳ ಕಾರ್ಯ ವೈಖರಿಗಳ ಪರಿಶೀಲನೆ ಸೇರಿದಂತೆ ಅನೇಕ ಅನುಷ್ಠಾನಗಳಲ್ಲಿ ಇರುವುದೇ ಹೆಚ್ಚು. ಆದರೆ, ಕೊಪ್ಪಳ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಅವರು ಸ್ವಾತಂತ್ರ್ಯೋತ್ಸವ ದಿನದಂದು ಕಚೇರಿಯ ಧ್ವಜಾರೋಹಣ ನಂತರ ರೈತರೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿ ಮಹತ್ವದ ಸಲಹೆಗಳನ್ನು ನೀಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ತುಂಗಭದ್ರ್ರಾ ನದಿಯಿಂದ ಎಡದಂಡೆ ಕಾಲುವೆಗೆ ನೀರು ಬಿಟ್ಟ ಹಿನ್ನಲೆೆಯಲ್ಲಿ ನೀರಾವರಿ ಪ್ರದೇಶದಲ್ಲಿ ರೈತರು ಸಸಿ ನಾಟಿ ಕಾರ್ಯದಲ್ಲಿ ತೊಡಗಿದ್ದು, ಗಂಗಾವತಿ ತಾಲೂಕಿನ ಕೊಟಯ್ಯ ಕ್ಯಾಂಪ್ಗೆ ಮಂಗಳವಾರ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಅವರು ಭೇಟಿ ನೀಡಿದರು. ಬಿಳಿ ಟೀಶರ್ಟ್, ಬಿಳಿ ಲುಂಗಿ, ಹಸಿರು ಟವೆಲ್ ತಲೆಗೆ ಸುತ್ತಿಕೊಂಡಿದ್ದ ಇವರು ಕೃಷಿ ಅಧಿಕಾರಿಗಳು, ರೈತರು, ರೈತ ಮಹಿಳೆಯರೊಂದಿಗೆ ಭತ್ತದ ಗದ್ದೆಗೆ ಇಳಿದು ಭತ್ತದ ಸಸಿ ನಾಟಿ ಮಾಡಿ ಅನ್ನದಾತರೊಂದಿಗೆ ಸ್ವಾತಂತ್ರ್ಯೋತ್ಸವ ಆಚರಿಸಿ ಅರ್ಥಗೊಳಿಸಿದರು.
ಹೆಚ್ಚು ಸಮಯ ಖುಷಿಯಿಂದಲೇ ರೈತರೊಂದಿಗೆ ಭತ್ತದ ಸಸಿ ನಾಟಿ ಮಾಡಿದರು. ಇವರೊಂದಿಗೆ ಗ್ರಾಮದ ಕಾಲೇಜು ವಿದ್ಯಾರ್ಥಿನಿಯರು, ಮಹಿಳೆಯರು ಹುಮ್ಮಸ್ಸಿನಿಂದ ಸಸಿ ನಾಟಿ ಮಾಡಿದರು. ಜೊತೆಗೆ ರೈತರಿಗೆ ಭತ್ತನಾಟಿ ಯಂತ್ರ ಪರಿಚಯಿಸಲು ಸಿಇಒ ಅವರೇ ಪ್ರಾಯೋಗಿಕವಾಗಿ ಕೆಲವೊತ್ತು ಯಂತ್ರ ಚಲಾಯಿಸಿ ತೋರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಹಳೆಯ ಕೃಷಿ ಪದ್ಧತಿಯನ್ನು ಬಿಟ್ಟು ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಕೃಷಿ ಸಂಬಂಧಿ ಅನೇಕ ಸರಳ ಯಂತ್ರಗಳು ಲಭ್ಯವಿದ್ದು, ಅವುಗಳನ್ನು ಬಳಸುವ ಮೂಲಕ ಸಮಯವನ್ನು ಉಳಿಸಿಕೊಳ್ಳಬಹುದು ಮತ್ತು ಹೆಚ್ಚು ಆದಾಯವನ್ನು ಪಡೆಯಬಹುದು ಎಂದು ಸಲಹೆ ನೀಡಿದರು.
ಬಳಿಕ ರೈತ ಉತ್ಪಾದಕ ಕಂಪನಿ ನಿಯಮಿತದ ರೈತರೊಂದಿಗೆ ಚರ್ಚಿಸಿದರು. ಇದೇ ಗ್ರಾಮದಲ್ಲಿ ಆತ್ಮ ಯೋಜನೆಯಡಿ ಸಂಘ ರಚಿಸಿಕೊಂಡು ಬದುಕು ಕಟ್ಟಿಕೊಂಡಿರುವ ಆತ್ಮ ಅನ್ನಪೂರ್ಣೆಶ್ವರಿ ಮಹಿಳಾ ಸಂಘದ ಸದಸ್ಯರೊಂದಿಗೆ ಯೋಜನೆಯಿಂದ ಆದ ಲಾಭದ ಕುರಿತು ಸಂವಾದಿಸಿ ಅವರ ಸ್ವಾವಲಂಬಿ ಜೀವನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ರೈತರೊಂದಿಗೆ ಗದ್ದೆಗೆ ಹೋಗುವ ದಾರಿ ಬಳಿ ಕುಳಿತು ಹುಗ್ಗಿ, ಪಲ್ಯ, ಅನ್ನ ಸಾಂಬರ್ ಸವಿದರು.