ಸುದ್ದಿಮೂಲ ವಾರ್ತೆ
ನಾಗಮಂಗಲ, ಅ.26: ಆಧುನಿಕ ವೈದ್ಯಕೀಯದ ಜೊತೆಗೆ ಪಾರಂಪರಿಕ ವೈದ್ಯ ಪದ್ದತಿಯನ್ನ ನಾವು ಮುಖ್ಯವಾಹಿನಿಗೆ ತರಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅವರು, ನಾಗಮಂಗಲ ಆದಿಚುಂಚನಗಿರಿ ಸಂಸ್ಥಾನದಲ್ಲಿ ಇಂದು ರಾಷ್ಟ್ರೀಯ ಪಾರಂಪರಿಕ ವೈದ್ಯರ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಳೆಯುತ್ತಿರುವ ವಿಜ್ಞಾನ ತಂತ್ರಜ್ಞಾನದ ಯುಗದಲ್ಲಿ ಬಹುತೇಕರು ನಾಟಿ ವೈದ್ಯ ಪದ್ದತಿಯನ್ನ ನಂಬಲ್ಲ. ಆದರೆ ಅಲೋಪತಿ ಬರುವ ಮುನ್ನ ನಮ್ಮ ರಾಜ ಮಹಾರಾಜರಿಗೆ ಚಿಕಿತ್ಸೆ ನೀಡಿ, ಕಾಯಿಲೆಗಳನ್ನ ವಾಸಿಮಾಡುತ್ತಿದ್ದುದು ನಮ್ಮ ಗಿಡ ಮೂಲಿಕೆಗಳ ಔಷಧಿಯ ನಾಟಿ ಪದ್ದತಿ ಎಂಬುದನ್ನ ಮರೆಯಬಾರದು ಎಂದರು.
ಗಿಡ ಮೂಲಿಕೆಗಳ ಚಿಕಿತ್ಸೆ, ಪಾರಂಪರಿಕ ವೈದ್ಯ ಪದ್ದತಿ ಮುಖ್ಯವಾಹಿನಿಗೆ ತರಬೇಕು. ಆದರೆ ತರಲಾಗುತ್ತಿಲ್ಲ. ಅದಕ್ಕೆ ಮುಖ್ಯ ಕಾರಣ ನಕಲಿ ವೈದ್ಯರ ಹಾವಳಿ. ನಕಲಿ ವೈದ್ಯರ ಹಾವಳಿಯಿಂದಾಗಿಯೇ ನಾಟಿ ವೈದ್ಯ ಪದ್ದತಿ ಮುಖ್ಯವಾಹಿನಿಗೆ ಬರದೇ ಮರೆಮಾಚಿ ಹೋಗುತ್ತಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಗ್ರಾಮೀಣ ಪ್ರದೇಶದಲ್ಲಿ ಬಡ ಜನರಿಗೆ ಕಡಿಮೆ ಖರ್ಚಿನಲ್ಲಿ ಆರೋಗ್ಯ ಒದಗಿಸುವಲ್ಲಿ ಪಾರಂಪರಿಕ ವೈದ್ಯರ ಕೊಡುಗೆ ಖಂಡಿತವಾಗಿಯೂ ಇದೆ. ಇವತ್ತಿಗೂ ಅನೇಕರು ಆಸ್ಪತ್ರೆಗಳಲ್ಲಿ ದುಬಾರಿ ವೆಚ್ಚದ ಚಿಕಿತ್ಸೆ ಹೇಳಿದಾಗ, ನಾಟಿ ಔಷಧಿಯ ಮೇಲೆ ನಂಬಿಕೆಯಿಟ್ಟು ಚಿಕಿತ್ಸೆ ಪಡೆಯುತ್ತಾರೆ. ಗಿಡಮೂಲಿಕೆ ಔಷಧಿ ಉಪಚಾರಗಳಿಂದ ಅತಿ ಕಡಿಮೆ ಖರ್ಚಿನಲ್ಲಿ ಬಡವರಿಗೆ ಆರೋಗ್ಯ ಸೇವೆ ಒದಗಿಸಬಹುದು. ಈ ನಿಟ್ಟಿನಲ್ಲಿ ನಮ್ಮ ಪಾರಂಪರಿಕ ವೈದ್ಯ ಪದ್ದತಿ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.
ಸರ್ಕಾರಕ್ಕೆ ನಿಜವಾದ ನಾಟಿ ವೈದ್ಯರ ಮೇಲೆ ನಂಬಿಕೆಯಿದ್ದರೂ, ನಕಲಿ ವೈದ್ಯರಿಂದಾಗಿ ಈ ಪದ್ದತಿಯನ್ನ ಪ್ರೋತ್ಸಾಹಿಸಲು ಸಾಧ್ಯವಾಗುತ್ತಿಲ್ಲ. ನೈಜ ನಾಟಿ ವೈದ್ಯರನ್ನ ಗುರುತಿಸುವುದು ಒಂದು ಸವಾಲು. ಹೀಗಾಗಿ ಒಂದು ಫ್ರೆಮ್ ವರ್ಕ್ ಮುಖ್ಯ. ನಿಯಮಾವಳಿಗಳೊಂದಿಗೆ ನಾಟಿ ವೈದ್ಯರನ್ನ ಗುರುತಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಚರ್ಚಿಸಿ ತೀರ್ಮಾನಗಳನ್ನ ತೆಗೆದುಕೊಳ್ಳಲು ಮುಕ್ತ ಮನಸ್ಸು ಹೊಂದಿದೆ ಎಂದು ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು. ಈ ನಿಟ್ಟಿನಲ್ಲಿ ನಾಟಿ ವೈದ್ಯರ ಔಷಧಿ ವಿಧಾನಗಳು, ಗಿಡಮೂಲಿಕೆಗಳ ಬಗ್ಗೆ ವಿಸ್ತ್ರತವಾಗಿ ವರದಿಯೊಂದಿಗೆ ಮನವಿ ಸಲ್ಲಿಸುವಂತೆ ಪಾರಂಪರಿಕ ವೈದ್ಯರ ಪರಿಷತ್ ಗೆ ಸಚಿವರು ಸೂಚನೆ ನೀಡಿದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ್ ಸ್ವಾಮಿಜಿ ಆರೋಗ್ಯ ಕ್ಷೇತ್ರದಲ್ಲಿ ಹಳೇ ಬೇರು ಹೊಸ ಚಿಗುರು ಎರಡು ಮುಖ್ಯ ಎಂದುಹೇಳಿದರು.