ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ.18; ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯ ನೋಂದಣಿ ಪ್ರಕ್ರಿಯೆ ರಾಜ್ಯಾದ್ಯಂತ ಆರಂಭವಾಗಿದೆ. ಆದರೆ, ಆರಂಭದಲ್ಲಿಯೇ ಸೇವಾಸಿಂಧು ಪೋರ್ಟಲ್ ಸ್ಥಗಿತಗೊಂಡು ಮೊದಲ ದಿನ ಅರ್ಜಿ ಸಲ್ಲಿಸಬೇಕೆಂದವರಿಗೆ ನಿರಾಸೆ ಮೂಡಿಸಿದೆ.
ಪ್ರತಿ ಗ್ರಾಹಕರಿಗೂ ಸರಾಸರಿ ಮಾಸಿಕ 200 ಯೂನಿಟ್ ವಿದ್ಯುತ್ ಉಚಿತವಾಗಿ ಪೂರೈಸುವಂತಹ ಗೃಹಜ್ಯೋತಿ ಯೋಜನೆಗೆ ಎಲ್ಲೆಡೆ ನೋಂದಾಯಿಸಿಕೊಳ್ಳಲು ಗ್ರಾಹಕರು ತುದಿಗಾಲ ಮೇಲೆ ನಿಂತಿದ್ದಾರೆ. ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. ಇದರ ಜೊತೆಗೆ ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅಥವಾ ವಿದ್ಯುತ್ ಕಚೇರಿಗಳಲ್ಲೂ ನೋಂದಣಿ ಮಾಡಬಹುದು.
ತಿಂಗಳಿಗೆ 200 ವಿದ್ಯುತ್ ಯೂನಿಟ್ಗಿಂತ ಕಡಿಮೆ ಬಳಸುವವರು ಮಾತ್ರ ಈ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ರಾಜ್ಯದಲ್ಲಿ 2.14 ಕೋಟಿ ಕುಟುಂಬಗಳಿಗೆ ಈ ಪ್ರಯೋಜನ ದೊರಕಲಿದೆ ಎಂದು ಅಂದಾಜು ಮಾಡಲಾಗಿದೆ. ರಾಜ್ಯದ ಬೇರೆ ಬೇರೆ ಜಿಲ್ಲಾ ಕೇಂದ್ರಗಳಲ್ಲೂ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಈ ಹಿಂದಿನ ವರ್ಷದಲ್ಲಿ ಸರಾಸರಿ ಮಾಸಿಕ 200 ಯೂನಿಟ್ ವಿದ್ಯುತ್ ಬಳಕೆ ಮಾಡಿದ ಜೆಸ್ಕಾಂನ ಗೃಹ ಬಳಕೆಯ ಗ್ರಾಹಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ.
ಆಫ್ಲೈನ್ ಮತ್ತು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಎಲ್ಲ ಎಸ್ಕಾಂ ಕಚೇರಿಗಳಲ್ಲಿ, ನಾಡ ಕಚೇರಿಗಳಲ್ಲೂ ಅರ್ಜಿ ಸಲ್ಲಿಸಬಹುದಾಗಿದ್ದು, ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡಲು ಭಾನುವಾರ ಈ ಕಚೇರಿಗಳು ತೆರೆದಿದ್ದವು.
ಆರಂಭದಲ್ಲಿಯೇ ವಿಘ್ನ:
ಗೃಹಜ್ಯೋತಿ ಯೋಜನೆಯ ಲಾಭ ಪಡೆದುಕೊಳ್ಳಲು ಜನ ಅರ್ಜಿ ಸಲ್ಲಿಸಲು ಇಂದು ಬೆಳಗ್ಗೆಯಿಂದ ಕಾದು ಕುಳಿತುಕೊಂಡಿದ್ದರು. ಆದರೆ, ಎಲ್ಲರೂ ಒಂದೇ ಬಾರಿ ಸೇವಾಸಿಂಧು ಪೋರ್ಟಲ್ಗೆ ಲಾಗಿನ್ ಆಗಿ ಅರ್ಜಿ ಸಲ್ಲಿಕೆಗೆ ಮುಂದಾಗಿದ್ದರಿಂದ ಸರ್ವರ್ ಡೌನ್ ಆಗಿ ಪೋರ್ಟರ್ ಸ್ಥಗಿತಗೊಂಡಿದೆ.
ಅರ್ಜಿ ಸಲ್ಲಿಕೆಗಾಗಿ ಬೆಂಗಳೂರು ಒನ್, ಬೆಸ್ಕಾಂ ಆಫೀಸ್ಗಳಲ್ಲಿ ಬಂದಿದ್ದ ಜನರು ಕಾದು ಕಾದು ಸುಸ್ತಾಗಿದ್ದರು. ಮಧ್ಯಾಹ್ನವಾದರೂ ಗೃಹಜ್ಯೋತಿ ವೆಬ್ ಸೈಟ್ ಓಪನ್ ಆಗುತ್ತಿಲ್ಲ. ಇದರಿಂದ ಅರ್ಜಿ ಹಾಕುವುದಕ್ಕೆ ಬಂದಿದ್ದ ಕೆಲವು ಜನರು ವಾಪಾಸ್ ಹೋಗುತ್ತಿದ್ದಾರೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಮುಂದಾದವರೂ ಸಹ ಹತ್ತಾರು ಬಾರಿ ಸೇವಾಸಿಂಧು ಪೋರ್ಟಲ್ ಲಾಗಿನ್ ಆಗಿ ನೋಡಿದರೂ ಅರ್ಜಿ ಸಲ್ಲಿಕೆಗೆ ಸಾಧ್ಯವಾಗಲಿಲ್ಲ. ಅಧಿಕಾರಿಗಳು ತಾಂತ್ರಿಕ ಪರಿಣತರನ್ನು ಕರೆಯಿಸಿ ಸರ್ವರ್ನ್ನು ಸರಿಪಡಿಸುವ ಕೆಲಸ ನಡೆಸಿದರೂ ಸಂಜೆಯವರೆಗೆ ಪೋರ್ಟಲ್ ಆರಂಭವಾಗಿರಲಿಲ್ಲ. ಇದರಿಂದ ಭಾನುವಾರ ರಜೆಯಲ್ಲಿದ್ದ ಅನೇಕರು ಅರ್ಜಿ ಸಲ್ಲಿಕೆಗೆ ಪ್ರಯತ್ನಿಸಿ ಸುಸ್ತಾದರು.
ಅರ್ಜಿ ಸಲ್ಲಿಕೆ ಹೇಗೆ?
ಗೃಹಜ್ಯೋತಿ ಯೋಜನೆ ಲಾಭ ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದೆ. www.sevasindhugs.karnataka.gov.in ವೆಬ್ಸೈಟ್ಗೆ ಲಾಗಿನ್ ಆಗಬೇಕಿದ್ದು. ಮೊಬೈಲ್, ಕಂಪ್ಯೂಟರ್, ಲ್ಯಾಪ್ಟಾಪ್ನಲ್ಲೂ ಅರ್ಜಿ ಸಲ್ಲಿಸಬಹುದು. ಅಷ್ಟೇ ಅಲ್ಲ, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ನಾಡ ಕಚೇರಿ, ಗ್ರಾಮ ಪಂಚಾಯಿತಿ ಕಚೇರಿ, ವಿದ್ಯುತ್ ಕಚೇರಿಗಳಲ್ಲೂ ನೋಂದಾಯಿಸಬಹುದು. ಅರ್ಜಿ ಸಲ್ಲಿಕೆಗೆ ಆಧಾರ್ ಕಾರ್ಡ್, ಆರ್ಆರ್ ನಂಬರ್, ಮೊಬೈಲ್ ಸಂಖ್ಯೆ ಹಾಗೂ ಮನೆ ಬಾಡಿಗೆ ಕರಾರು ಪತ್ರ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಗೊಂದಲ ನಿವಾರಿಸಲು ಸಹಾಯವಾಣಿಯನ್ನೂ ತೆರೆಯಲಾಗಿದ್ದು, 1912 ಕ್ಕೆ ಕರೆ ಮಾಡಿ ಮಾತನಾಡಬಹುದಾಗಿದೆ.
ಬಾಡಿಗೆ ಮನೆಯವರಿಗೂ ಫ್ರೀ ವಿದ್ಯುತ್
ಬಾಡಿಗೆ ಮನೆಯಲ್ಲಿದ್ದವರಿಗೂ ಯೋಜನೆ ಅನ್ವಯಿಸುತ್ತಾ ಎನ್ನುವ ಗೊಂದಲ ಇತ್ತು. ಇದಕ್ಕೆ ಉತ್ತರ ನೀಡಿರುವ ಬೆಸ್ಕಾಂಗ್, ಬಾಡಿಗೆ ಮನೆ ವಿಳಾಸ ಮತ್ತು ಆರ್ಆರ್ ಸಂಖ್ಯೆಯನ್ನ ಸೇವಾ ಸಿಂಧು ಪೋರ್ಟಲ್ನಲ್ಲಿ ನೋಂದಾಯಿಸಿ ಯೋಜನೆ ಲಾಭ ಪಡೆಯಬಹುದು ಎಂದು ಹೇಳಿದೆ. ಇನ್ನು ಯಾವುದಾದರೂ ಒಂದು ತಿಂಗಳಲ್ಲಿ 200 ಯೂನಿಟ್ಗಿಂತ ಹೆಚ್ಚಾಗಿ ವಿದ್ಯುತ್ ಬಳಸಿದರೆ ಏನ್ ಮಾಡಬೇಕು ಅನ್ನೋ ಗೊಂದಲ ಇತ್ತು. ಅದಕ್ಕೂ ಪರಿಹಾರ ನೀಡಿರುವ ಬೆಸ್ಕಾಂ, ಆ ತಿಂಗಳ ಪೂರ್ಣ ವಿದ್ಯುತ್ ಬಿಲ್ ಪಾವತಿಸಿ ಯೋಜನೆಯಲ್ಲಿ ಮುಂದುವರಿಬಹುದು ಎಂದು ತಿಳಿಸಿದೆ.
ಹೊಸದಾಗಿ ವಿದ್ಯುತ್ ಸಂಪರ್ಕ ಪಡೆದವರಿಗೆ:
ಹೊಸದಾಗಿ ವಿದ್ಯುತ್ ಸಂಪರ್ಕ ಪಡೆದವರಿಗೆ ಯೋಜನೆ ಅನ್ವಯಿಸುತ್ತಾ ಅನ್ನೋ ಪ್ರಶ್ನೆ ಇತ್ತು. ಹೊಸದಾಗಿ ವಿದ್ಯುತ್ ಸಂಪರ್ಕ ಪಡೆದವರಿಗೆ, ಸರ್ಕಾರವೇ 53 ಯೂನಿಟ್ ವರೆಗೆ ಉಚಿತ ಸರಾಸರಿಯನ್ನ ನೀಡ್ತಿದ್ದು, 53 ಯೂನಿಟ್ ವರೆಗೆ ಫ್ರೀ ವಿದ್ಯುತ್ ಸಿಗಲಿದೆ.
2022-23ರಲ್ಲಿ, ಯಾರಾದರೂ ಒಂದು ವರ್ಷಕ್ಕಿಂತ ಕಡಿಮೆ ಸಮಯ ಮನೆಯಲ್ಲಿದ್ದರೆ ಅವರಿಗೆ ಹೇಗೆ ಸರಾಸರಿ ಮಿತಿ ಕೊಡುತ್ತಾರೆ ಎನ್ನುವ ಗೊಂದಲ ಇತ್ತು. ಅದಕ್ಕೂ ಪರಿಹಾರ ನೀಡಿರುವ ಬೆಸ್ಕಾಂ, ವರ್ಷಕ್ಕಿಂತ ಕಡಿಮೆ ಸಮಯ ಮನೆಯಲ್ಲಿದ್ರೆ, ಸರ್ಕಾರ ನಿಗದಿ ಪಡಿಸಿರುವ 53 ಯೂನಿಟ್ ವರೆಗೂ ಉಚಿತ ವಿದ್ಯುತ್ ಸಿಗಲಿದೆ. ಇನ್ನು ಅಪಾರ್ಟ್ಮೆಂಟ್ಗಳಿಗೂ ಈ ಯೋಜನೆ ಅನ್ವಯಿಸಲಿದ್ದು, ಯಾವ ಯಾವ ಮನೆಗಳಿಗೆ ಪ್ರತ್ಯೇಕ ಮೀಟರ್ ಇದೆಯೋ ಆ ಎಲ್ಲಾ ಮನೆಗಳಿಗೂ ಈ ಯೋಜನೆ ಅನ್ವಯಿಸಲಿದೆ ಅಂತಾ ಬೆಸ್ಕಾಂ ತಿಳಿಸಿದೆ. ಅರ್ಜಿ ಸಲ್ಲಿಕೆಗೆ
ಯಾವುದೇ ಕೊನೆಯ ದಿನ ನಿಗದಿ ಮಾಡದೇ ಇರುವುದರಿಂದ ಸಾಕಷ್ಟು ಸಮಯ ಸಿಗಲಿದೆ.