ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂ.23:ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳ ಮನೆಯೊಡತಿಗೆ ಮಾಸಿಕ 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಲು ಸರ್ವರ್ ಸಮಸ್ಯೆ ಎದುರಾಗುತ್ತಿದೆ. ಅರ್ಜಿ ಸಲ್ಲಿಕೆ ದಿನಾಂಕವನ್ನು ಈಗಾಗಲೇ ಎರಡು ಬಾರಿ ಮುಂದೂಡಲಾಗಿದೆ. ಜು.26ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆಯಾದರೂ ಇದು ಸಾಧ್ಯವಾಗದು ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಗೃಹಜ್ಯೋತಿ ಯೋಜನೆಯಡಿ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅದೇ ಸೇವಾಸಿಂಧು ಪೋರ್ಟಲ್ ಮೂಲಕ ಗೃಹಲಕ್ಷ್ಮಿ ಯೋಜನೆಯಡಿಯೂ ಅರ್ಜಿ ಸಲ್ಲಿಕೆ ಮಾಡಬೇಕಾಗುವುದರಿಂದ ಒತ್ತಡ ಹೆಚ್ಚಾಗಿ ಸರ್ವರ್ ಬಂದ್ ಆಗುತ್ತಿದೆ. ಗೃಲಕ್ಷ್ಮಿ ಯೋಜನೆಯಡಿ ಸುಮಾರು ಎರಡು ಕೋಟಿ ಅರ್ಜಿಗಳು ಸಲ್ಲಿಕೆಯಾಗುವ ಅಂದಾಜು ಇರುವುದರಿಂದ ಇದಕ್ಕಾಗಿ ಪ್ರತ್ಯೇಕ ಮೊಬೈಲ್ ಆ್ಯಪ್ ಸಹ ಸಿದ್ಧಪಡಿಸಲು ಚಿಂತಿಸಲಾಗಿದೆ. ಆದರೆ, ಆ ಆ್ಯಪ್ ರಚನೆಯಾಗಿ ಅರ್ಜಿ ಸಲ್ಲಿಕೆ ಆರಂಭಿಸುವುದರೊಳಗೆ ಒಂದು ವಾರವಾದರೂ ಕಾಲಾವಕಾಶ ಬೇಕು ಎನ್ನಲಾಗುತ್ತಿದೆ.
ಗೃಹಲಕ್ಷ್ಮಿ ಯೋಜನೆ ಜಾರಿ ಸಂಬಂಧ ವಿಧಾನಸೌಧದಲ್ಲಿ ಇಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉನ್ನತ ಮಟ್ಟದ ಸಭೆ ನಡೆಸಿದರು. ಸಚಿವರಾದ ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್, ಐಎಎಸ್ ಅಧಿಕಾರಿಗಳಾದ ಪೊನ್ನುರಾಜ್, ಅಂಜುಮ್ ಪರ್ವೇಜ್, ಮಂಜುಳಾ, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್ ಮತ್ತಿತರರು ಭಾಗವಹಿಸಿದ್ದರು.
ಜು.26ರಿಂದ ಅರ್ಜಿ ಸಲ್ಲಿಕೆ ಮಾಡಬಹುದು ಎಂದು ಈಗಾಗಲೇ ಘೋಷಣೆ ಮಾಡಿರುವುದರಿಂದ ಅದು ಸಾಧ್ಯವಾಗುತ್ತದೆ? ತಾಂತ್ರಿಕ ಸಮಸ್ಯೆಗಳೇನು ಎಂಬುದರ ಬಗ್ಗೆ ಚರ್ಚಿಸಲಾಯಿತು.
ಇದಕ್ಕೂ ಮುನ್ನ ಶುಕ್ರವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಗೃಹಲಕ್ಷ್ಮಿ ಯೋಜನೆ ಜಾರಿಯನ್ನು ನಾನೇ ಸದ್ಯಕ್ಕೆ ತಡೆದಿದ್ದೇನೆ. ಗೃಹಜ್ಯೋತಿ ಯೋಜನೆ ಅರ್ಜಿ ವಿಚಾರವಾಗಿ ಸರ್ವರ್ ಸಮಸ್ಯೆ ನೋಡುತ್ತಿದ್ದೀರಿ. ಗೃಹಲಕ್ಷ್ಮಿ ಯೋಜನೆಯಲ್ಲಿ ಮನೆಯೊಡತಿಯೇ ಸ್ವಯಂ ಅರ್ಜಿ ಸಲ್ಲಿಸುವಂತೆ ಸರಳೀಕರಣ ಮಾಡಲಾಗುತ್ತಿದೆ. ಆನ್ಲೈನ್ ಹಾಗೂ ಆಫ್ ಲೈನ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಈ ವಿಚಾರವಾಗಿ ಇಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಹಾಗೂ ಅಧಿಕಾರಿಗಳ ಜತೆ ಸಭೆ ಮಾಡಲಾಗುವುದು. ಈ ಯೋಜನೆಗಳಿಗೆ ಆನ್ ಲೈನ್ ಅರ್ಜಿ ಸಲ್ಲಿಕೆಗೆ ಕೆಲವರು 200-300 ರೂ. ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ನಮಗೆ ದೂರು ಬಂದಿದೆ. ಈ ಅರ್ಜಿ ತುಂಬಲು ಏಜೆನ್ಸಿಗಳಾಗಲಿ ಅಥವಾ ಯಾರೇ ಲಂಚ ಪಡೆದರೆ ಅವರ ಪರವಾನಿಗೆ ರದ್ದಾಗುತ್ತದೆ, ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆ ನೀಡುತ್ತಿದ್ದೇನೆ. ಈ ಯೋಜನೆಗಳಿಗೆ ನೋಂದಣಿ ಮಾಡಿಕೊಳ್ಳಲು ಹೋಗುವವರು ಯಾರಿಗೂ ಲಂಚ ನೀಡುವ ಅಗತ್ಯವಿಲ್ಲ. ಯಾರಾದರೂ ಲಂಚ ಕೇಳಿದರೆ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ನೀಡಿ. ನಾವು ಅವರ ವಿರುದ್ಧ ಕ್ರಮ
ಕೈಗೊಳ್ಳುತ್ತೇವೆ. ಲಂಚ ಮುಕ್ತ ರಾಜ್ಯ ನಮ್ಮ ಗುರಿ’ ಎಂದು ತಿಳಿಸಿದರು.