ಸುದ್ದಿಮೂಲ ವಾರ್ತೆ
ಆನೇಕಲ್, ಜು.20: ಗೃಹಲಕ್ಷ್ಮೀ ಯೋಜನೆಯಡಿ ಅರ್ಜಿ ಸಲ್ಲಿಸಲು ಬಂದ ಮಹಿಳೆಯರು ಸರ್ವರ್ ಡೌನ್ ಆದ ಕಾರಣ ತೊಂದರೆ ಆನುಭವಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ಮಾಡಲು ಮಹಿಳೆಯರು ಆನೇಕಲ್ ತಾಲ್ಲೂಕಿನ ಹೊಸೂರು ಮುಖ್ಯ ರಸ್ತೆಯ ಹೊಪ್ಪಲ್ಲಘಟ್ಟ ಗ್ರಾಮ ಒನ್ ಸೇವಾ ಕೇಂದ್ರಕ್ಕೆ ಬಂದಿದ್ದರು. ಆದರೆ, ಸರ್ವರ್ ಡೌನ್ ಆಗಿದ್ದ ಕಾರಣ ಸಾಕಷ್ಟು ಸಮಯ ಕಾದು ಕುಳಿತರೂ ಅರ್ಜಿ ಸಲ್ಲಿಕೆ ಸಾಧ್ಯವಾಗದೆ ವಾಪಸ್ ತೆರಳಿದ್ದಾರೆ.
ಇನ್ನು ರಾಜ್ಯ ಸರ್ಕಾರದ ಬಹು ನಿರೀಕ್ಷಿತ ‘ಗೃಹ ಲಕ್ಷ್ಮಿ’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಚಾಲನೆ ನೀಡಿದ್ದರು. ಇಂದು ಆನೇಕಲ್ ಪಟ್ಟಣದಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಲು ಗೃಹಣಿಯರು ಬೆಳಗ್ಗೆ 10 ಗಂಟೆಗೆ ಗ್ರಾಮ ಒನ್ ಸೇವಾ ಕೇಂದ್ರಕ್ಕೆ ಮಹಿಳೆಯರು ಬಂದಿದ್ದರು. ಆದರೆ, ಗೃಹಲಕ್ಷ್ಮಿ ಯೋಜನೆಯ ಸರ್ವರ್ ಡೌನ್ ಆದರಿಂದ ಕೆಲ ಗೃಹಿಣಿಯರು ವಾಪಸ್ ಆಗಿದ್ದಾರೆ. ಇನ್ನು ಕೆಲವರು ಕಾದು ಕುಳಿತು ಅರ್ಜಿ ಸಲ್ಲಿಸಿದರು. ವೆಬ್ಸೈಟ್ ಸರ್ವರ್ ಡೌನ್ ಆದರಿಂದ ಅಪ್ಲಿಕೇಶನ್ ಓಪನ್ ಆಗುತ್ತಿಲ್ಲ ಮತ್ತೆ ಒಂದು ದಿನಕ್ಕೆ 60 ಜನರಿಗೆ ಮಾತ್ರ ಅವಕಾಶವನ್ನು ಕಲ್ಪಿಸಲಾಗಿದೆ.
ಕೆಲವರು ಮೆಸೇಜ್ ಬರದೇ ಇರುವವರು ಕೂಡ ಬಂದಿದ್ದಾರೆ. ಅವರಿಗೆ ತಿಳುವಳಿಕೆಯನ್ನು ಕೊಟ್ಟು ಮೊಬೈಲ್ ನಂಬರ್ ಮೂಲಕ ರಿಜಿಸ್ಟ್ರೇಷನ್ ಮಾಡಿಸುತ್ತಿದ್ದೇವೆ. ಆನೇಕಲ್ ಸುತ್ತಮುತ್ತ ಇರುವ ಎಲ್ಲಾ ಕೇಂದ್ರಗಳಲ್ಲಿ ಇದೇ ತರದ ಪರಿಸ್ಥಿತಿ ಎದುರಾಗಿದೆ. ಗ್ರಾಮ ಒನ್ ಕೇಂದ್ರದ ಆಪರೇಟರ್ ಹರೀಶ್ಮಾಹಿತಿ ನೀಡಿದರು.