ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.15: ರಾಜ್ಯ ಸರ್ಕಾರದ ಪಂಚಖಾತರಿ ಯೋಜನೆಗಳಲ್ಲಿ ಒಂದಾದ ಹಾಗೂ ಪ್ರತಿಯೊಂದು ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡುವ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇದೇ 19ರಿಂದ ಜಾರಿಯಾಗಲಿದೆ ಎಂದು ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಅವರು, ಯೋಜನೆಯಡಿ, ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿಗಳನ್ನು ಆಗಸ್ಟ್ 18ರಿಂದ ನೀಡಲಾಗುತ್ತದೆ. ಗೃಹ ಲಕ್ಷ್ಮೀ ಯೋಜನೆಯನ್ನು ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಕೈಯಿಂದಲೇ ಉದ್ಘಾಟನೆ ಮಾಡಲು ಯೋಚಿಸಲಾಗಿದೆ. ಒಂದು ವೇಳೆ ಅವರ ದಿನಾಂಕ ಲಭ್ಯವಾಗದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳ ನೋಂದಣಿ ಜುಲೈ 19 ರಿಂದ ಆರಂಭವಾಗಲಿದ್ದು, ಈ ಕಾರ್ಯಕ್ರಮದ ಉದ್ಘಾಟನೆಗೆ ರಾಷ್ಟ್ರೀಯ ನಾಯಕರಿಗೆ ಆಹ್ವಾನ ಮಾಡಲು ನಿರ್ಧಾರ ಮಾಡಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಈ ಪ್ರಯತ್ನಗಳು ನಡೆದಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಅರ್ಜಿ ಸಲ್ಲಿಕೆಗೆ ಯಾವುದೇ ನಿಗದಿತ ಗಡುವು ಇಲ್ಲ ಎಂದರು. ಸರ್ಕಾರಿ ಬಿಲ್ ಪಾವತಿ ಹಾಗೂ ಇತರ ಸೇವಾ ಕೇಂದ್ರಗಳಾದ ಬೆಂಗಳೂರು ಒನ್, ಬಿಬಿಎಂಪಿ ಕಚೇರಿಗಳು, ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಕೇಂದ್ರಗಳು ಹಾಗೂ ತಾಲೂಕು ಕಚೇರಿಗಳು, ನಾಡ ಕಚೇರಿಗಳಲ್ಲಿ ಈ ಯೋಜನೆಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿದಾರರು ಆನ್ ಲೈನ್ ಮೂಲಕ ಅಥವಾ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದರು.
ಐಟಿ ರಿಟರ್ನ್ಸ್ ಸಲ್ಲಿಕೆ ಅಥವಾ ಜಿಎಸ್ ಟಿ ಪಾವತಿ ಮಾಡದವರಿಗೆ ಮಾತ್ರ ಗೃಹ ಲಕ್ಷ್ಮಿ ಯೋಜನೆ ಅನ್ವಯವಾಗುತ್ತದೆ. ಎಪಿಎಲ್, ಬಿಪಿಎಲ್ ಕಾರ್ಡುದಾರರು ಅಂತ್ಯೋದಯ ಯೋಜನೆಯ ಫಲಾನುಭವಿಗಳು ಇದರ ಲಾಭ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ, ಕರ್ನಾಟಕ ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲೂ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಪ್ರತಿ ಫಲಾನುಭವಿಯ ನೋಂದಣಿಗೆ ನಿಗದಿ ಮಾಡಿದ ದಿನಾಂಕ, ಸಮಯ ಮತ್ತು ಸ್ಥಳವನ್ನು 1902 ಗೆ ಕರೆ ಮಾಡಿ ಅಥವಾ 8147500500 ಸಂಖ್ಯೆಗೆ ಎಸ್ಎಂಎಸ್ ಅಥವಾ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ ಮಾಹಿತಿ ಪಡೆಯಬಹುದು. ಈ ಯೋಜನೆಯಡಿ ಫಲಾನುಭವಿಯು ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ ಮತ್ತು ನೋಂದಣಿ ಪ್ರಕ್ರಿಯ ಉಚಿತವಾಗಿರುತ್ತದೆ ಎಂದು ವಿವರಿಸಿದರು.
ಈ ಯೋಜನೆಯಡಿ ಯಾವುದೇ ಅಂತಿಮ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿಲ್ಲ. ಆದ್ದರಿಂದ ಒಂದು ವೇಳೆ ನಿಗದಿತ ದಿನಾಂಕ ಅಥವಾ ಸಮಯಕ್ಕೆ ನೋಂದಾಯಿಸಿಕೊಳ್ಳಲು ಸಾಧ್ಯವಾಗದೇ ಇದ್ದಲ್ಲಿ ಮುಂದೆ ಯಾವುದೇ ದಿನಾಂಕ, ಸಮಯದಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ತಿಳಿಸಿದ್ದಾರೆ.