ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಜು 20 : ಗೃಹಲಕ್ಷ್ಮೀ ಯೋಜನೆ ನೋಂದಣೆಗೆ ಪುರಸಭೆ ವ್ಯಾಪ್ತಿಯಲ್ಲಿ ಮೂರು ಕೇಂದ್ರಗಳನ್ನು ತೆರೆಯಲಾಗಿದ್ದು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ದೊಡ್ಡಮಲವಯ್ಯ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಪುರಸಭೆ ಆವರಣದ ನೋಂದಣೆ ಕೇಂದ್ರದಲ್ಲಿ ಗೃಹಲಕ್ಷ್ಮೀ ಯೋಜನೆ ನೋಂದಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ನೋಂದಣಿಗೆ ಫಲಾನುಭವಿಗಳಿಗೆ ಯಾವುದೇ ತೊಡಕುಗಳು ಆಗದಂತೆ, ಪುರಸಭೆ ವ್ಯಾಪ್ತಿಯ 23 ವಾರ್ಡುಗಳ ಪೈಕಿ 3 ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ.
ಪ್ರತಿ 500 ಫಲಾನುಭವಿಗಳಿಗೆ ಒಬ್ಬರಂತೆ ಪ್ರಜಾ ಪ್ರತಿನಿಧಿಯನ್ನು ನೇಮಕ ಮಾಡಲಾಗಿದ್ದು, ಪ್ರತಿ ಮನೆಗೆ ಅವರು ತೆರಳಿ ಸ್ಥಳದಲ್ಲಿಯೇ ನೋಂದಣಿ ಕಾರ್ಯ ಮಾಡಲಿದ್ದಾರೆ. ಇದರಿಂದ ಪುರಸಭೆ ವ್ಯಾಪ್ತಿಯಲ್ಲಿ ನೋಂದಣೆಗೆ ನೂಕುನುಗ್ಗಲಾಗದಂತೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಕೆಂದ್ರಗಳಿಗೆ ಬೇಕಾದ ಸಿಬ್ಬಂದಿಯನ್ನು ಸಹ ನಿಯೋಜನೆ ಮಾಡಲಾಗಿದೆ. ಎಂದು ಹೇಳಿದರು.
ಎಲ್ಲೆಲ್ಲಿ ಕೇಂದ್ರಗಳ ಸ್ಥಾಪನೆ:
ಕೇಂದ್ರ-1 : ವಾರ್ಡ್ ನಂ-22ರ ಪ್ರಶಾಂತನಗರದಲ್ಲಿ ತೆರೆದಿರುವ ನೋಂದಣೆ ಕೆಂದ್ರದಲ್ಲಿ: ವಾರ್ಡ್1, 2 3, 4, 5 , 16, 21, 22 ವಾರ್ಡಿನ ಸಾರ್ವಜನಿಕರು ನೋಂದಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಕೆಂದ್ರ-2: ವಾರ್ಡ್ ನಂ -20, ಪುರಸಭೆ ಕಚೇರಿ ಸಮುದಾಯ ಭವನದಲ್ಲಿ ವಾರ್ಡ್ ನಂ – 11, 12, 13, 15, 17, 18, 19 , 20 ನೇ ವಾರ್ಡಿನ ಸಾರ್ವಜನಿಕರು ನೋಂದಣೆ ಮಾಡಬಹುದಾಗಿದೆ
ಕೇಂದ್ರ 3 ವಾರ್ಡ್ ನಂ- 7, ಹಳೆಪುರಸಭೆ ಕಟ್ಟಡದಲ್ಲಿ, ವಾರ್ಡ್ ನಂ- 6, 7, 8, 9, 10, 14 ಮತ್ತು 23 ನೇ ವಾರ್ಡಿನ ಜನತೆಗೆ ನೋಂದಣೆಗೆ ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರು ನೋಂದಣೆಗೆ ಬರುವಾಗ ಅಗತ್ಯ ದಾಖಲೆಗಳ ಸಮೇತ ಕೇಂದ್ರಕ್ಕೆ ಭೇಟಿ ನೀಡಿ ನೋಂದಣೆ ಮಾಡಿಕೊಳ್ಳಬಹುದಾಗಿದೆ. ಪ್ರತಿ ಕೇಂದ್ರದಲ್ಲೂ ಮೇಲ್ವಿಚಾರಣೆ ಪುರಸಭೆ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದರು.
ಈ ವೇಳೆ ಸಮುದಾಯ ಸಂಘಟನಾ ಅಧಿಕಾರಿ ಬೈರಪ್ಪ ಕಂದಾಯ ನಿರೀಕ್ಷಕ ಎ.ಮಂಜುನಾಥ್, ದ್ವಿತೀಯ ದರ್ಜೆ ಸಹಾಯಕ ವಿ.ಮಂಜುನಾಥ್, ಜಗದೀಶ್ ಸೇರಿದಂತೆ ಮಹಿಳೆಯರು ಇದ್ದರು.