ಜೂ.20:ತಿಪಟೂರು ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ರೈಲಿನ ಸೇವೆಯನ್ನು ಪ್ರಯಾಣಿಕರಿಗೆ ದೊರಕಲು ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದು, ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ಈ ಭಾಗದಲ್ಲಿ ರೈಲುಗಳ ಸೇವೆ ಕೂಡ ಹೆಚ್ಚಾಗಿ ಬೇಕು ಎಂದು ಸಂಸದ ಜಿಎಸ್ ಬಸವರಾಜು ಹೇಳಿದರು.
ನಗರದ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆಗೆ ಹಸಿರು ನಿಶಾನೆ ಕಾರ್ಯಕ್ರಮದಲ್ಲಿ ಮಾತನಾಡಿದವರು, ಭಾರತದಲ್ಲಿ ನಿರ್ಮಾಣವಾಗಿರುವ ಸ್ವದೇಶಿ ರೈಲು ಇದಾಗಿದೆ, ಈಗಾಗಲೇ ವಿದ್ಯುದ್ದೀಕರಣ ಮೂಲಕ ರೈಲುಗಳು ಓಡಾಡುತ್ತಿದ್ದು, ಈ ಭಾಗದಲ್ಲಿ 28 ರೈಲುಗಳು ಪ್ರತಿನಿತ್ಯ ಓಡಾಡುತ್ತವೆ, ಇನ್ನೂ ಹೆಚ್ಚಿನ ರೈಲುಗಳು ಪ್ರಯಾಣಿಕರ ಅನುಕೂಲಕ್ಕಾಗಿ ಬೇಕಾಗಿದೆ ಎಂದು ಹೇಳಿದರು.
ಶಾಸಕ ಕೆ ಷಡಕ್ಷರಿ ಮಾತನಾಡಿ, ವಾಣಿಜ್ಯ, ಶೈಕ್ಷಣಿಕ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಕಲ್ಪತರು ನಾಡು ತಿಪಟೂರು ಅಭಿವೃದ್ಧಿ ಹೊಂದುತ್ತಿದ್ದು, ಜನ ಶತಾಬ್ದಿ ರೈಲು ಸೇರಿದಂತೆ ಎಕ್ಸ್ ಪ್ರೆಸ್ ರೈಲುಗಳ ನಿಲುಗಡೆ ಇಲ್ಲಿ ಆಗಬೇಕಿದೆ ಎಂದು ಹೇಳಿದರು.
ಮಾಜಿ ಸಚಿವ ಬಿ ಸಿ ನಾಗೇಶ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವದೇಶಿ ನಿರ್ಮಿತ ವಂದೇ ಭಾರತ್ ಎಕ್ಸ್ಪ್ರೆಸ್ ಐದು ರೈಲಿನ ಉದ್ಘಾಟನೆಯನ್ನು ಮಾಡಿದ್ದಾರೆ, 480 ಕಿಲೋಮೀಟರ್ 6 ಗಂಟೆ 30 ನಿಮಿಷದಲ್ಲಿ ತಲುಪುವ ಈ ರೈಲು, ದೇಶದ ಹೆಗ್ಗಳಿಕೆಯಾಗಿದೆ, ಮುಂಬರುವ ದಿನಗಳಲ್ಲಿ ತಿಪಟೂರಿನಲ್ಲಿ ಕೂಡ ಈ ರೈಲು ನಿಲ್ಲಿಸಲು ಮನವಿ ಮಾಡುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಕಲ್ಪಶ್ರೀ, ತಹಸೀಲ್ದಾರ್ ಪವನ್ ಕುಮಾರ್, ತಾಲೂಕು ಪಂಚಾಯಿತಿ ನಿರ್ವಹಣಾಧಿಕಾರಿ ಸುದರ್ಶನ್, ರೈಲ್ವೆ ಸ್ಟೇಷನ್ ಮಾಸ್ಟರ್ ಹರಿಲಾಲ್ ಮೀನಾ, ಆಲ್ ಇಂಡಿಯಾ ರೈಲ್ವೆ ಟ್ರ್ಯಾಕ್ ಮೇಂಟೇನರ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಾಂತರಾಜು ಎ ವಿ ಮತ್ತಿತರರು ಉಪಸ್ಥಿತರಿದ್ದರು.