ಸುದ್ದಿಮೂಲ ವಾರ್ತೆ
ಬೆಂಗಳೂರು, ನ. 07 : ಆಗ್ನೇಯ ಅರಬ್ಬಿ ಸಮುದ್ರದಲ್ಲಿ ಸುಳಿಗಾಳಿ ಎದ್ದಿದ್ದು, ಟ್ರಫ್ ನಿರ್ಮಾಣವಾಗಿದೆ. ಇದರ ಪ್ರಭಾವದಿಂದಾಗಿ ರಾಜ್ಯಾದ್ಯಂತ ಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರಲ್ಲಿ ಬೆಳಗಿನ ಸಮಯ ಮೋಡ ಕವಿದ ವಾತಾವರಣ ಇದ್ದರೆ, ಮಧ್ಯಾಹ್ನ ಆಗುತ್ತಿದ್ದಂತೆ ಕಗ್ಗತ್ತಲು ಆವರಿಸಿತ್ತು. ಮಧ್ಯಾಹ್ನ 3ರ ಸುಮಾರಿಗೆ ಶುರುವಾದ ಮಳೆಯು ಅರ್ಧ ಗಂಟೆಗೂ ಹೆಚ್ಚು ಸಮಯ ಅಬ್ಬರಿಸಿದೆ.
ನಗರದ ವಿಧಾನಸೌಧ, ಶಿವಾಜಿನಗರ, ಕಬ್ಬನ್ಪಾರ್ಕ್, ಕೆಆರ್ ಸರ್ಕಲ್ ಸೇರಿದಂತೆ ಫ್ರೀಡಂ ಪಾರ್ಕ್, ಮೆಜೆಸ್ಟಿಕ್, ಕೆಆರ್ ಮಾರ್ಕೆಟ್ ಸುತ್ತಮುತ್ತ ಗುಡುಗು ಸಹಿತ ಭಾರಿ ಮಳೆಯಾಗಿದೆ. ಇನ್ನೆರಡು ದಿನಗಳು ಬೆಂಗಳೂರಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಮಳೆಗೆ ಸಿಎಆರ್ ಕಚೇರಿಯ ಗೋಡೆ ಕುಸಿದ ಪರಿಣಾಮ ಕೊಠಡಿಯಲ್ಲಿಟ್ಟಿದ್ದ ಗನ್ಗಳು ನೀರಲ್ಲಿ ತೇಲಿ ಬಂದಿದೆ.
ಇತ್ತೀಚೆಗೆ ನಿರ್ಮಾಣವಾಗಿದ್ದ ಸಶಸ್ತ್ರ ಮೀಸಲು ಪಡೆ ಕಚೇರಿಯ ಗೋಡೆ ಕುಸಿದಿದೆ. ಪರಿಣಾಮ ಮಳೆ ನೀರು ಕಚೇರಿಯೊಳಗೆ ನುಗ್ಗಿದೆ. ಬೆಂಗಳೂರು ಪಶ್ಚಿಮದ ಉಲ್ಲಾಳದಲ್ಲಿರುವ ನಗರ ಸಶಸ್ತ್ರ ಮೀಸಲು ಪಡೆ ಕಚೇರಿಯೊಳಗೆ ಘಟನೆ ನಡೆದಿದೆ. ಇಡೀ ರಾತ್ರಿ ಮಳೆ ನೀರಿನಲ್ಲೆ ಸಿಎಆರ್ ಸಿಬ್ಬಂದಿ ಕಾಲ ಕಳೆದಿದ್ದಾರೆ. ಗನ್ಗಳನ್ನು ಇಟ್ಟಿದ್ದ ಕೊಠಡಿಗೂ ನೀರು ನುಗ್ಗಿದ್ದರಿಂದ ಎಲ್ಲವೂ ತೇಲಿ ಬಂದಿತ್ತು. ಲಕ್ಷಾಂತರ ರೂಪಾಯಿ ವೆಚ್ಚದ ಶಸ್ತ್ರಾಸ್ರಗಳು ಹಾನಿಯಾಗಿದೆ. ಕಳಪೆ ಕಾಮಗಾರಿಯಿಂದ ಗೋಡೆ ಕುಸಿದಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.